ಉತ್ತರ ಅಮೆರಿಕ: ಪಶ್ಚಿಮಾರ್ಧಗೋಳದಲ್ಲಿ ಉತ್ತರ-ದಕ್ಷಿಣವಾಗಿ ಉದ್ದಕ್ಕೆ ಚಾಚಿ, ಪನಾಮ ಭೂಕಂಠ (ಇಸ್ತಮಸ್) ದಿಂದ ಪರಸ್ಪರ ಕೂಡಿಕೊಂಡಿದ್ದು ಈಚೆಗೆ (1904-14) ಪನಾಮ ಕಾಲುವೆಯಿಂದ ಬೇರ್ಪಟ್ಟಿರುವ ಜೋಡಿ ಖಂಡಗಳಲ್ಲಿ ಉತ್ತರದ ಭಾಗ. ಕೆನಡ, ಅಲಾಸ್ಕವೂ ಸೇರಿದ ಅಮೆರಿಕ ಸಂಯುಕ್ತ ಸಂಸ್ಥಾನ ಮೆಕ್ಸಿಕೋಗಳನ್ನು ಈ ಖಂಡ ಒಳಗೊಂಡಿದೆ. ಭೌಗೋಳಿಕವಾಗಿ ಗ್ರೀನ್ಲೆಂಡೂ ಉತ್ತರ ಅಮೆರಿಕಕ್ಕೇ ಸೇರಿದೆಯೆನ್ನ ಬಹುದಾದರೂ ಅದು ಡೆನ್ಮಾರ್ಕಿನ ಅಧೀನರಾಜ್ಯ. ಮಧ್ಯ ಅಮೆರಿಕದ ಪ್ರದೇಶವನ್ನು ಉತ್ತರ ಅಮೆರಿಕದ ದಕ್ಷಿಣಭಾಗವೆಂದು ಪರಿಗಣಿಸುವುದು ರೂಢಿ. ವಿಸ್ತೀರ್ಣದಲ್ಲಿ ಜಗತ್ತಿನ ಮೂರನೆಯ ಖಂಡವಾಗಿರುವ ಉತ್ತರ ಅಮೆರಿಕ ಸ್ಥೂಲವಾಗಿ ತ್ರಿಕೋನದ ಹಾಗೆ ಕಾಣುತ್ತದೆ. 24,247,039 ಚ.ಕಿ.ಮೀ. ಎಂದರೆ ಭೂಮಿಯ 16.4ರಷ್ಟು-ಇದರ ವಿಸ್ತೀರ್ಣ. ಜನ ಸಂಖ್ಯೆ 454,225,000 ಈ ಖಂಡದ ಪೂರ್ವದಲ್ಲಿ ಉತ್ತರ ಅಟ್ಲಾಂಟಿಕ್ ಸಾಗರ, ಆಗ್ನೇಯದಲ್ಲಿ ಮೆಕ್ಸಿಕೊ ಖಾರಿ ಮತ್ತು ಕೆರಿಬಿಯನ್ ಸಮುದ್ರ; ಪಶ್ಚಿಮದಲ್ಲಿ ಉತ್ತರ ಪೆಸಿಫಿಕ್ ಸಾಗರ ಮತ್ತು ಬೇರಿಂಗ್ ಸಮುದ್ರ; ಉತ್ತರದಲ್ಲಿ ಆರ್ಕ್ಟಿಕ್ ಸಾಗರಗಳಿವೆ. ಈ ಖಂಡವನ್ನು ಏಷ್ಯಖಂಡದಿಂದ ಬೇರಿಂಗ್ ಜಲಸಂಧಿ ಬೇರ್ಪಡಿಸುತ್ತದೆ. 
ಮೇಲ್ಮೈಲಕ್ಷಣ
ಉತ್ತರ ಅಮೆರಿಕವನ್ನು 
1 ಪೂರ್ವದ ಎತ್ತರದ ಪ್ರದೇಶಗಳು, 
2 ಪಶ್ಚಿಮದ ಸಮಾನಾಂತರ ಪರ್ವತಶ್ರೇಣಿಗಳು, 
3 ಮಧ್ಯದ ತಗ್ಗು ಬಯಲು ಮತ್ತು 
4 ಮಧ್ಯ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್ ದ್ವೀಪಗಳ ಎತ್ತರ ಪ್ರದೇಶಗಳು ಎಂದು ವಿಭಾಗಿಸಬಹುದು.
ಮೊದಲು ಮೂರು ವಿಭಾಗಗಳೂ ಖಂಡ ಪುರ್ತಿ ಉತ್ತರ ದಕ್ಷಿಣವಾಗಿ, ಸಮಾನಾಂತರ ವಾಗಿ ಹರಡಿವೆ. ನಾಲ್ಕನೆಯದು ಮೊದಲ ರೂಪಕ್ಕೆ ಲಂಬವಾಗಿ ಪೂರ್ವದಿಂದ ಪಶ್ಚಿಮಕ್ಕೆ ಹರಡಿದೆ.

ಪೂರ್ವದ ಎತ್ತರ ಪ್ರದೇಶಗಳು
ಅಪಲೇಷಿಯನ್ ಪರ್ವತಗಳು, ಲ್ಯಾಬ್ರಡಾರ್ ಮತ್ತು ನ್ಯೂಫೌಂಡ್ಲೆಂಡ್ ಪ್ರಸ್ಥಭೂಮಿಗಳು ಇದರಲ್ಲಿವೆ. ಪಶ್ಚಿಮದ ಪರ್ವತ ಶ್ರೇಣಿಗಳು ಸಮುದ್ರತಳದಲ್ಲಿದ್ದಾಗಲೇ ಈ ಪ್ರದೇಶ ಪರ್ವತಮಯವಾಗಿತ್ತು. ಜಲಪ್ರವಾಹಗಳಿಂದ ಭೂಮಿ ಸವೆದು ಅನೇಕ ಆಳವಾದ ಕಣಿವೆಗಳು ನಿರ್ಮಾಣವಾದವು. ನದಿ, ವಾಯುಗಳ ನಗ್ನೀಕರಣದ ಪರಿಣಾಮವಾಗಿ ಎತ್ತರದ ಪ್ರದೇಶಗಳು ಮಟ್ಟಸವಾದವು. ಇವು 2130 ಮೀ ಗಳಿಗಿಂತಲೂ ಎತ್ತರವಾಗಿಲ್ಲವಾದರೂ ಮಧ್ಯದ ತಗ್ಗು ಬಯಲಿಗೂ ಮತ್ತು ಅಟ್ಲಾಂಟಿಕ್ ಸಾಗರಕ್ಕೂ ಹಿಂದೆ ಅಡ್ಡಿಯಾಗಿ ನಿಂತಿದ್ದುವು. ಆದರೆ ಇವುಗಳಲ್ಲೂ ಕಣಿವೆ ಮಾರ್ಗಗಳಿವೆ. ಇವು ತೀರಪ್ರದೇಶಕ್ಕೂ ಒಳನಾಡಿಗೂ ಸಂಬಂಧ ಕಲ್ಪಿಸುತ್ತವೆ. ಪರ್ವತಗಳ ಪಶ್ಚಿಮಭಾಗದಲ್ಲಿ ಹುಟ್ಟುವ ಸಸ್ಕ್ವಿಹನ, ಪಟೊಮಕ್, ಜೇಮ್ಸ್‌ ಮುಂತಾದ ನದಿಗಳು ಬೆಟ್ಟಗಳನ್ನು ಭೇದಿಸಿ, ಕಣಿವೆಗಳನ್ನು ನಿರ್ಮಿಸಿ ಪೂರ್ವದ ಕಡೆ ಹರಿಯುತ್ತವೆ.
ಅಪಲೇಷಿಯನ್ ಪರ್ವತಗಳ ಪೂರ್ವಕ್ಕೆ ಸಮಾನಾಂತರವಾಗಿ ಪುರಾತನ ಶಿಲೆಗಳಿಂದ ಕೂಡಿದ ಪ್ರಸ್ಥಭೂಮಿ ಇದೆ. ಇದಕ್ಕೂ ಸಮುದ್ರತೀರಕ್ಕೂ ಮಧ್ಯೆ ಇಳಿಜಾರು ಪ್ರದೇಶವಿದೆ. ಇಲ್ಲಿ ಹರಿಯುವ ನದಿಗಳಲ್ಲಿ ಅನೇಕ ಜಲಪಾತಗಳಿವೆ. ಅಲ್ಲಿಂದ ಮುಂದೆ ತೀರದಲ್ಲಿ ಎಲ್ಲ ನದಿಗಳೂ ಆಳವಾಗಿ ಹರಿಯುತ್ತವೆ. ಆದ್ದರಿಂದ ಸಮುದ್ರದಿಂದ ಬರುವ ಹಡಗುಗಳು ಇವುಗಳಲ್ಲೆಲ್ಲ ಓಡಾಡಬಹುದು.

ಪಶ್ಚಿಮದ ಸಮಾನಾಂತರ ಪರ್ವತಶ್ರೇಣಿಗಳು
ಈ ಪರ್ವತ ಸಾಲುಗಳು ಇತ್ತೀಚೆಗೆ ನಿರ್ಮಿತವಾದವು. ಆದ್ದರಿಂದ ಇವು ಎತ್ತರವಾಗಿಯೂ ವಿಶಾಲವಾಗಿಯೂ ಇವೆ. ಶ್ರೇಣಿಗಳ ಮಧ್ಯದಲ್ಲಿ ಪ್ರಸ್ಥಭೂಮಿಗಳೂ ನದೀಬಯಲುಗಳೂ ಇವೆ. ಪೂರ್ವದಲ್ಲಿ ರಾಕಿ ಪರ್ವತಗಳು ಮತ್ತು ಪೂರ್ವ ಸಿಯೆರ ಮಾದ್ರೆ ಪರ್ವತಶ್ರೇಣಿಗಳಿವೆ. ಪಶ್ಚಿಮದಲ್ಲಿ ತೀರಪರ್ವತಗಳು, ಸಿಯೆರ ನವಾಡ, ಪಶ್ಚಿಮ ಸಿಯೆರ ನವಾಡ, ಪಶ್ಚಿಮ ಮಾದ್ರೆ ಶ್ರೇಣಿಗಳಿವೆ. ಈ ಹೊಸ ಶ್ರೇಣಿಗಳಲ್ಲಿ ಅನೇಕ ಜೀವಂತ ಜ್ಞಾಲಾಮುಖಿಗಳು ಲಾವಾರಸವನ್ನು ಸುತ್ತ ಹರಡಿದವು. ಈಗಲೂ ಅಲ್ಲಲ್ಲಿ ಸುಪ್ತ ಜ್ಙಾಲಾಮುಖಿಗಳನ್ನು ಕಾಣಬಹುದು. ಚಿನ್ನ, ಬೆಳ್ಳಿ, ತಾಮ್ರ ಇತ್ಯಾದಿ ಅಮೂಲ್ಯ ಖನಿಜಗಳು ಇಲ್ಲಿ ದೊರಕುವಂತೆ ಆದದ್ದು ಈ ಜ್ಞಾಲಾಮುಖಿಗಳ ಕಾರ್ಯದಿಂದ.
ಮಧ್ಯದ ಪ್ರಸ್ಥಭೂಮಿಗಳಲ್ಲಿ ಕೊಲರಾಡೊ ಪ್ರಸ್ಥಭೂಮಿ 1828ಮೀ ಎತ್ತರವಾಗಿದೆ; ಬ್ರಿಟಿಷ್ ಕೊಲಂಬಿಯ ಮತ್ತು ಅಲಾಸ್ಕ ಪ್ರಸ್ಥಭೂಮಿಗಳ ಎತ್ತರ ಕಡಿಮೆ. ಮಧ್ಯದ ಪ್ರದೇಶ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ವಿಶಾಲವಾಗಿದೆ. ಅವುಗಳ ನಿರ್ಮಾಣದ ಶಿಲಾಪದರಗಳು ಅನೇಕ ಅಚ್ಚುಗಳಾಗಿ ವಿಭಾಗವಾಗಿವೆ. ಅವುಗಳಲ್ಲಿ ಅತ್ಯಂತ ವಿಶಾಲವಾದದ್ದು 5,43,900 ದ.ಕಿ.ಮೀ. ವಿಸ್ತಾರದ ಗ್ರೇಟ್ ಬೇಸನ್ ಎಂಬುದು. ಇದರ ದಕ್ಷಿಣದಲ್ಲಿನ ಕೊಲರಾಡೊ ನದಿ ಕೆಲವು ಕಡೆ 1525-1830ಮೀ. ಆಳದ ಭವ್ಯವಾದ ಪಾತ್ರವನ್ನು ಕೊರೆದುಕೊಂಡು ಹರಿಯುತ್ತದೆ. 

ಮಧ್ಯದ ತಗ್ಗು ಬಯಲುಗಳು
ಧ್ರುವಪ್ರದೇಶದಿಂದ ದಕ್ಷಿಣದ ಮೆಕ್ಸಿಕೊವರೆಗೂ ಈ ವಿಶಾಲಪ್ರದೇಶ ಹಬ್ಬಿದೆ. ಉತ್ತರ ಅಮೆರಿಕದ 3/5 ಭಾಗವನ್ನು ಈ ಪ್ರದೇಶ ಆಕ್ರಮಿಸಿದೆ. ಇದರ ನಿರ್ಮಾಣ ಈಚಿನದು. ಆದರೆ ಕೆನಡಿಯನ್ ಶಿಲಾಫಲಕದ (ಷೀಲ್ಡ್‌) ಭಾಗ ಅಮೆರಿಕದಲ್ಲೇ ಅತ್ಯಂತ ಪ್ರಾಚೀನವಾದ, ಗಟ್ಟಿ ಶಿಲೆಗಳಿಂದ ಕೂಡಿದ ಪ್ರದೇಶ. ಇದು ಅನೇಕ ಶತಮಾನಗಳಿಂದ ನಗ್ನೀಕರಣಕ್ಕೆ ತುತ್ತಾಗಿರುವುದರಿಂದ ಸಮಮಟ್ಟ ಮೈದಾನವಾಗಿ ಉತ್ತರ ಧ್ರುವಪ್ರದೇಶದ ಕಡೆಗೆ ಇಳಿಜಾರಾಗಿದೆ. ಅನೇಕ ಸರೋವರಗಳೂ ಉತ್ತರದ ಕಡೆಗೆ ಹರಿಯುವ ಸಣ್ಣ ನದಿಗಳೂ ಇಲ್ಲಿವೆ. ಇಲ್ಲಿಂದ ದಕ್ಷಿಣದ ಕಡೆಗೆ ಹರಿದು ಸೇಂಟ್ ಲಾರೆನ್ಸನ್ನು ಸೇರುವ ನದಿಗಳಲ್ಲಿ ಅನೇಕ ಜಲಪಾತಗಳಿವೆ. ಕೆನಡಿಯನ್ ಶಿಲಾಫಲಕಕ್ಕೆ ಪಶ್ಚಿಮ ಮತ್ತು ದಕ್ಷಿಣದಲ್ಲಿ, ಜಲಜಶಿಲೆಗಳನ್ನೊಳಗೊಂಡ ಸಮಾನಾಂತರ ಪದರಗಳಿಂದ ಕೂಡಿದ ವಿಶಾಲ ಬಯಲುಗಳಿವೆ. ಅದರೆ ಅಲ್ಲಲ್ಲಿ ಪುರಾತನ ಶಿಲೆಗಳಿಂದಾದ ದ್ವೀಪಗಳೂ ಇವೆ. ಆರ್ಕ್ಟಿಕ್ ಮಹಾಸಾಗರದಿಂದ ಮೆಕ್ಸಿಕೊ ಕೊಲ್ಲಿಯವರೆಗೆ ಪ್ರಯಾಣ ಮಾಡುವವರು 305 ಮೀ.ಗಳಿಗಿಂತ ಹೆಚ್ಚು ಎತ್ತರದ ಪ್ರದೇಶವನ್ನು ಕಾಣಲಾರರು. ಅಲ್ಲಲ್ಲೆ ಕಂಡುಬರುವ ಎತ್ತರದ ಪ್ರದೇಶಗಳು ಡಕೋಟ ಸಂಸ್ಥಾನದ ಬ್ಲ್ಯಾಕ್ಹಿಲ್ಸ್‌, ಮಿóಸ್ಸೂರಿ ಮತ್ತು ಅರಕಾನ್ಸಸ್ ನದಿಗಳ ಮಧ್ಯ ಭಾಗದ ಓeóÁರ್ಕ್ ಬೆಟ್ಟಗಳು.
ಈ ಬಯಲನ್ನು ಹೀಗೆ ವಿಂಗಡಿಸಬಹುದು: 1 ಮೆಕೆಂಜಿû ನದಿಯ ಉತ್ತರದ ತಗ್ಗು ಬಯಲು, 2 ಸೇಂಟ್ ಲಾರೆನ್ಸ್‌ ಪಂಚಮಹಾಸರೋವರಗಳ ತಗ್ಗುಬಯಲು. 3 ಮಿಸಿಸಿಪಿ ನದಿಯ ತಗ್ಗು ಬಯಲು. 4 ಆಗ್ನೇಯದ ತಗ್ಗು ಬಯಲು, 5 ರಾಕಿ ಪರ್ವತಗಳ ಕಡೆ ಹೋದಂತೆಲ್ಲ ಏರುವ ಎತ್ತರದ ಬಯಲುಗಳು. 

ಮಧ್ಯ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್ ದ್ವೀಪಗಳಲ್ಲಿ ಎತ್ತರ ಪ್ರದೇಶಗಳು
ಇಲ್ಲಿ ತೀರದ ಮೈದಾನಗಳಿಂದ ಆವೃತವಾದ ಮಡಿಕೆ ಪರ್ವತಗಳಿಂದ ಕೂಡಿದ ಎತ್ತರ ಪ್ರದೇಶಗಳಿವೆ.

ಉತ್ತರ ಅಮೆರಿಕದಲ್ಲಿ ಹಿಮಶಿಲೆಯ ಪ್ರಭಾವ: ಹಿಮ ಶಿಲಾಯುಗದಲ್ಲಿ ಉ. ಅ. 40º ಯಿಂದ ಉತ್ತರಕ್ಕಿರುವ ಗ್ರೀನ್ಲೆಂಡ್ನ್ನೊಳಗೊಂಡ ಖಂಡಭಾಗವೆಲ್ಲ ನೀರ್ಗಲ್ಲು ಪದರಗಳಿಂದ ಮುಚ್ಚಿತ್ತು. ಇಂದಿಗೂ ಈ ಪದರಗಳು ಪುರ್ತಿಯಾಗಿ ಕಣ್ಮರೆಯಾಗಿಲ್ಲ. ಗ್ರೀನ್ಲೆಂಡಿನ ಹೆಚ್ಚು ಭಾಗ, ಬ್ಯಾಫಿನ್, ಡೆವಾನ್ ಮತ್ತು ವಿಲ್ಲೆನ್ ಮೆರೆ ದ್ವೀಪಗಳು ಅದರಡಿಯಲ್ಲಿವೆ. ಮಧ್ಯದ ತಗ್ಗು ಬಯಲಿನ ಉತ್ತರಾರ್ಧ ಭಾಗದ ಭೂಲಕ್ಷಣಗಳು ಹಿಮಶಿಲೆಯ ಪ್ರಭಾವದಿಂದ ರೂಪುಗೊಂಡಿವೆ. ಹಿಮಕರಗಿದ ಮೇಲೆ ಮರಳು, ಗಡುಸುಶಿಲೆ ಮತ್ತು ಕಲ್ಲುಗುಂಡುಗಳು ಅಧಿಕ ಪ್ರಮಾಣದಲ್ಲಿ ದೇಶದ ಎಲ್ಲ ಕಡೆಗಳಲ್ಲೂ ಸಂಚಿತವಾಗಿವೆ. ಹೆಚ್ಚು ಮರಳೂ ಕಲ್ಲೂ ಇಲ್ಲದ ಕಡೆಗಳಲ್ಲಿ ಇವುಗಳ ಸಂಚಯನದಿಂದ ಫಲವತ್ತಾದ ವ್ಯವಸಾಯ ಪ್ರದೇಶಗಳು ಏರ್ಪಟ್ಟಿವೆ. ಪರ್ವತಪ್ರದೇಶಗಳಲ್ಲಿ ಹಿಮನದಿಗಳು U ಆಕಾರದ ಕಣಿವೆಗಳನ್ನು ನಿರ್ಮಿಸಿವೆ, ಮತ್ತು ಪೆಸಿಫಿಕ್ ತೀರದಲ್ಲಿ ಕಡಲತೋಳುಗಳನ್ನು ಕತ್ತರಿಸಿವೆ. ಕೆನಡದ ಅಟ್ಲಾಂಟಿಕ್ ಪ್ರಾಂತ್ಯಗಳಲ್ಲಿ ಮತ್ತು ನ್ಯೂ ಇಂಗ್ಲೆಂಡಿನಲ್ಲಿ ಇರುವ ದೊಡ್ಡ ದೊಡ್ಡ ಕಲ್ಲುಗುಂಡುಗಳು ವ್ಯವಸಾಯಕ್ಕೆ ತುಂಬ ಅಡ್ಡಿಯಾಗಿವೆ. ಹಿಮದ ಕಾರ್ಯದಿಂದ, ಭೂರಚನೆಯಲ್ಲಿ ಅನೇಕ ಏರುಪೇರುಗಳಾಗಿ, ಜಲ ಪ್ರವಾಹಕ್ಕೆ ಅನೇಕ ಕಡೆ ಅಡ್ಡಿಯುಂಟಾಗಿ, ಇಂದಿನ ಅನೇಕ ಸರೋವರ ಮತ್ತು ನದಿಗಳು ನಿರ್ಮಿತವಾದವು. ಮೊದಲು ಸೇಂಟ್ ಲಾರೆನ್ಸ್‌ ನದಿಗೆ ಅಡ್ಡವಾಗಿ ಹಿಮಬಂಡೆಗಳು ಇದ್ದದ್ದರಿಂದ ಮಹಾಸರೋವರಗಳ ನೀರು ಮೊದಲು ಮಿಸಿಸಿಪ್ಪಿಯ ಮುಖಾಂತರವೂ ಅನಂತರ ಮೊಹಾಕ್, ಹಡ್ಸನ್ಗಳ ಮುಖಾಂತ ರವೂ ಹಿಮಶಿಲಾ ಯುಗದ ಅಂತ್ಯದಲ್ಲಿ ಸೇಂಟ್ಲಾರೆನ್ಸ್‌ ನ ಮೂಲಕವೂ ಹರಿಯತೊಡಗಿತು.

ನದಿಗಳು
ಏಕರೀತಿಯ ಒಳಪದರದ ಚಲನೆಗಳು ಉತ್ತರ ಅಮೆರಿಕದ ನದೀವ್ಯವಸ್ಥೆಯನ್ನು ರೂಪಿಸಿವೆ. ನದಿಗಳ ಚಲನೆಯಲ್ಲೂ ವ್ಯತ್ಯಾಸವಾಗಿದೆ. ಮಿಸಿಸಿಪಿ ನದೀವ್ಯೂಹ ಮೀಸೊಜೋಯಿಕ್ ಕಾಲದಲ್ಲಿ ಪೂರ್ವದಿಂದ ಹರಿದು ಬರುವ ಉಪನದಿಗಳನ್ನು ಹೊಂದಿದ್ದದು, ಟಿರ್ಷಿಯರಿ ಕಾಲದಲ್ಲಿ ಪಶ್ಚಿಮದಿಂದ ಹರಿದು ಬರುವ ಉಪನದಿಗಳಿಂದ ಪ್ರಭಾವಿತವಾಯಿತು. ಉತ್ತರ ಮಿನ್ನೆಸೋಟದ ಹಿಮನದಿಯ ಸಂಚಯನಗಳಿಂದ ಈ ನದೀವ್ಯೂಹ ತನ್ನ ಪಥವನ್ನೇ ಬದಲಾಯಿಸಿದೆ.

ಮೆಕೆಂಜಿ ನದಿಯೂ ಇದೇ ರೀತಿ ವಿಕಾಸಗೊಂಡಿದೆ. ಹಿಮನದಿಯ ಸವೆತ ಮತ್ತು ಸಂಚಯನಗಳ ಪರಿಣಾಮವಾಗಿ ಸೇಂಟ್ ಲಾರೆನ್ಸ್‌ ನದಿಯಂತೆ ಇದರ ಪಾತ್ರದಲ್ಲೂ ಅನೇಕ ಸರೋವರಗಳುಂಟಾಗಿವೆ.
ಬೇಸಗೆಯಲ್ಲಿ ಹಿಮ ಕರಗುವುದರಿಂದ ಉತ್ತರ ಹಾಗೂ ದಕ್ಷಿಣದ ಕಡೆಗಳಿಗೆ ಹರಿಯುವ ನದಿಗಳಲ್ಲಿ ಪ್ರವಾಹಗಳಿರುತ್ತವೆ. ಅಟ್ಲಾಂಟಿಕ್ ಸಾಗರಕ್ಕೆ ಹರಿಯುವ ಒಟ್ಟು ಜಲಪ್ರವಾಹಕ್ಕಿಂತ ಪೆಸಿಫಿಕ್ ಸಾಗರಕ್ಕೆ ಹರಿಯುವ ಜಲಪ್ರವಾಹ ಹೆಚ್ಚು. 

ಪೆಸಿಫಿಕ್ ಸಾಗರವನ್ನು ಸೇರುವ ನದಿಗಳ ಪೈಕಿ ಉತ್ತರ ಕೆನಡ ಮತ್ತು ಅಲಾಸ್ಕಗಳಲ್ಲಿ ಹರಿಯುವ 3200 ಕಿಮೀ ಉದ್ದದ ಯೂಕಾನ್ ನದಿ ಜಗತ್ತಿನ ದೊಡ್ಡ ನದಿಗಳಲ್ಲ್ಲೊಂದು; ಅಷ್ಟು ದೊಡ್ಡದಾದರೂ ಅದಕ್ಕೆ ಪ್ರಾಮುಖ್ಯ ಕಡಿಮೆ. ವರ್ಷದಲ್ಲಿ ಎಂಟು ತಿಂಗಳು ಹೆಪ್ಪುಗಟ್ಟಿರುವುದೂ ಮುಕ್ಕಾಲುಪಾಲು ಜನರಹಿತ ಪ್ರದೇಶಗಳಲ್ಲಿ ಹರಿಯುವುದೂ ಇದಕ್ಕೆ ಕಾರಣ. ಇನ್ನೂ ದಕ್ಷಿಣಕ್ಕೆ ಸ್ಕೀನಾ, ಫ್ರೇಸóರ್, ಕೊಲಂಬಿಯ (2,240 ಕಿಮೀ) ಮತ್ತು ಅದರ ಉಪನದಿ ಸ್ನೇಕ್ (1670 ಕಿಮೀ) ನದಿಗಳೂ ಜಗತ್ಪ್ರಸಿದ್ಧ ಕಂದರಹಳ್ಳಗಳನ್ನು (ಕ್ಯಾನಿಯನ್ನ್ಯಾನ್) ಹೊಂದಿರುವ ಕೊಲರಾಡೂ ನದಿಯೂ ಇವೆ.

ಆರ್ಕ್ಟಿಕ್ ಮತ್ತು ಹಡ್ಸನ್ ಕೊಲ್ಲಿಯನ್ನು ಸೇರುವ ನದಿಗಳಲ್ಲಿ ಮೆಕೆಂಜಿû ಮತ್ತು ಸಸ್ಕ್ಯಾಚವನ್, ನೆಲ್ಸನ್ಗಳು ಮುಖ್ಯವಾದವು. ಅಥಬಾಸ್ಕ ಮತ್ತು ಗ್ರೇಟ್ಸ್ಲೇವ್ ಸರೋವರಗಳ ಮುಖಾಂತರ 4241 ಕಿಮೀ ದೂರ ಮೆಕೆಂಜಿ ನದಿ ಹರಿಯುತ್ತದೆ. ಇಲ್ಲಿ ನಾವೆ ಪ್ರಯಾಣ ವರ್ಷದಲ್ಲಿ 4 ತಿಂಗಳು ಮಾತ್ರ. ಸಸ್ಕ್ಯಾಚವನ್ ನದಿ ಮಿನಿಪೆಗ್ ಸರೋವರ ಸೇರುತ್ತದೆ. ನೆಲ್ಸನ್ ನದಿಯ ಮುಖಾಂತರ ಅದರ ನೀರು ಹಡ್ಸನ್ ಕೊಲ್ಲಿ ಸೇರುತ್ತದೆ. ಅಟ್ಲಾಂಟಿಕ್ ಸಾಗರವನ್ನು ಸೇರುವ ನದಿಗಳಲ್ಲಿ ಸೇಂಟ್ಸ್‌ ಲಾರೆನ್ಸ್‌ ಬಹು ಮುಖ್ಯವಾದದ್ದು. ಐದು ಮಹಾಸರೋವರಗಳೊಡನೆ ಸಂಪರ್ಕ ಹೊಂದಿರುವ ಈ ನದಿ ಖಂಡದ ಒಳಭಾಗಕ್ಕೆ 4000 ಕಿಮೀ ಜಲಮಾರ್ಗವನ್ನೊದಗಿಸಿದೆ. ಇನ್ನೂ ದಕ್ಷಿಣದ ಕಡೆ ಇರುವ ನದಿಗಳು ಚಿಕ್ಕವಾದರೂ ಒಳನಾಡಿಗೆ ಜಲಮಾರ್ಗಗಳನ್ನು ನಿರ್ಮಿಸಿ, ಅವುಗಳ ಅಳಿವೆಗಳಲ್ಲಿ ಪ್ರಮುಖ ಬಂದರುಗಳನ್ನು ಹೊಂದಿವೆ. ಹಡ್ಸನ್, ಡೆಲೆವೇರ್, ಸಸ್ಕೆಹಾನ್ ಮುಂತಾದ ನದಿಗಳೂ ಮುಖ್ಯವಾದುವು.

ಮೆಕ್ಸಿಕೊ ಕೊಲ್ಲಿಯನ್ನು ಸೇರುವ ನದಿಗಳಲ್ಲಿ 5971 ಕಿಮೀ ಉದ್ದದ ಮಿಸಿಸಿಪ್ಪಿ ಮುಖ್ಯವಾದದ್ದು. ಇದರ ಜಲಾನಯನ ಪ್ರದೇಶ ಅಮೆರಿಕ ಸಂಯುಕ್ತ ಸಂಸ್ಥಾನದ 1/3 ಭಾಗವನ್ನು ಆಕ್ರಮಿಸಿದೆ. ಪ್ರಾರಂಭದಲ್ಲಿ ಇದು ಅನೇಕ ಜಲಪಾತಗಳನ್ನು ಹೊಂದಿದ್ದು, ಸರೋವರಗಳ ಮುಖಾಂತರ ಹಾದು ಹೋಗುತ್ತದೆ. ಸೇಂಟ್ ಲೂಯಿ ಬಳಿಯಲ್ಲಿ ರಾಕಿ ಪರ್ವತಗಳಿಂದ ಹರಿದು ಬರುವ 3,780 ಕಿಮೀ ಉದ್ದದ ಮಿಸûÆರಿ ನದಿ ಸೇರುತ್ತದೆ. ಇಲ್ಲಿಂದ ಮುಂದಿನ ಉಪನದಿಗಳು-ರೆಡ್ ರಿವರ್, ಒಹಾಯೊ, ಅರಕಾನ್ಸಾಸ್. 

ಸೇಂಟ್ ಲೂಯಿ ಬಳಿ ಮಿಸಿಸಿಪ್ಪಿಯ ಪ್ರವಾಹ ಮೈದಾನವನ್ನು ತಲಪುತ್ತದೆ. ಇದು ಸು. 40 ರಿಂದ 130ಕಿಮೀ ಗಳಷ್ಟು ಅಗಲವಾಗಿದೆ. ಅನೇಕ ಕಡೆ ಇದರ ಎರಡು ಪಾಶರ್ವ್‌ಗಳಲ್ಲೂ 60-90 ಮೀ ಅಡಿಗಳಷ್ಟು ಎತ್ತರದ ಕಡಿದಾದ ಬಂಡೆಗಳಿವೆ. ಮೆಕ್ಕಲುಮಣ್ಣು ತಳದಲ್ಲಿ ಸಂಚಿತವಾದಂತೆ ಅದರ ಆಳ ಕಡಿಮೆಯಾಗುತ್ತ ಹೋಗುತ್ತದೆ; ಇದರಿಂದ ನೀರು ಎರಡು ಕಡೆಗಳಲ್ಲೂ ಹರಡಲಾರಂಭಿಸುತ್ತದೆ. ಇಕ್ಕೆಡೆಯ ಫಲವತ್ತಾದ ಲೋಯೆಸ್ ಎಂಬ ಮಣ್ಣನ್ನು ಹೊಂದಿರುವ ಭೂಮಿಯನ್ನು ಪ್ರವಾಹದಿಂದ ರಕ್ಷಿಸುವುದಕ್ಕೆ ನದಿಯ ಎರಡು ಪಾಶರ್ವ್‌ಗಳಲ್ಲೂ ಏರಿಗಳನ್ನು ಕಟ್ಟಿದ್ದಾರೆ. ಪ್ರವಾಹದ ಹೆಚ್ಚು ನೀರನ್ನು ತಡೆಗಟ್ಟುವ ಸರೋವರಗಳಿಲ್ಲದಿರುವುದೇ ಈ ಏರ್ಪಾಡಿಗೆ ಕಾರಣ: ಮಿಸûÆರಿ, ಮಿಸಿಸಿಪ್ಪಿ ನದಿಗಳಲ್ಲಿ ಪ್ರವಾಹಗಳ ಹಾವಳಿ ಹೆಚ್ಚು. 3018 ಕಿಮೀ ಉದ್ದ ರಿಯೋ ಗ್ರ್ಯಾಂಡಿ ಎಂಬುದು ಮೆಕ್ಸಿಕೊ ಕೊಲ್ಲಿಯನ್ನು ಸೇರುವ ಮತ್ತೊಂದು ದೊಡ್ಡ ನದಿ. 

ವಾಯುಗುಣ
ಉತ್ತರ ದಕ್ಷಿಣವಾಗಿ ಹರಡಿರುವ ಪಶ್ಚಿಮದ ರಾಕಿ ಪರ್ವತಗಳು ಮತ್ತು ಪೂರ್ವದ ಅಪಲೇಷಿಯನ್ ಪರ್ವತಗಳು, ಮಧ್ಯದ ತಗ್ಗುಬಯಲನ್ನು ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳ ಪ್ರಭಾವದಿಂದ ದೂರಮಾಡಿವೆ. ಇದೊಂದು ಮೊಗಸಾಲೆ ಯಂತಿದೆ. ಉತ್ತರದ ಅಂಚಿನಲ್ಲಿ ಪರ್ವತಗಳು ಇಲ್ಲದಿರುವುದರಿಂದ ಉತ್ತರದ ಶೀತ ಮಾರುತಗಳು ಚಳಿಗಾಲದಲ್ಲಿ ದಕ್ಷಿಣಕ್ಕೆ ನ್ಯೂ ಆರ್ಲಿಯನ್ಸ್‌ವರೆಗೂ ಬೀಸುತ್ತವೆ. ಇದನ್ನು ಸರಿದೂಗಿಸಲೆಂಬಂತೆ, ದಕ್ಷಿಣದಲ್ಲಿ ಪರ್ವತಗಳು ಇಲ್ಲದಿರುವುದರಿಂದ, ಬೇಸಗೆಯಲ್ಲಿ ಗಲ್ಫ್‌ಸ್ಟ್ರೀಂ ಎಂಬ ಉಷ್ಣ ಪ್ರವಾಹದ ಮೇಲಿಂದ ಬೀಸುವ ಉಷ್ಣಮಾರುತಗಳು ಮೆಕ್ಸಿಕೊ ಕೊಲ್ಲಿಯಿಂದ ಮಧ್ಯ ಮಿಸಿಸಿಪ್ಪಿಯವರೆಗೂ ಬೀಸುತ್ತವೆ; ಈ ಖಂಡ ವಿಶಾಲವಾಗಿದ್ದು ಆರ್ಕ್ಟಿಕ್ ಸಾಗರದಿಂದ ಉಷ್ಣವಲಯದವರೆಗೂ ಹರಡಿರುವುದರಿಂದ, ವಾಯುಗುಣದಲ್ಲಿ ಅನೇಕ ವ್ಯತ್ಯಾಸಗಳಿವೆ. ಉತ್ತರ ದಕ್ಷಿಣಗಳಿಗೆ ಉಷ್ಣಾಂಶದ ವ್ಯತ್ಯಾಸವೂ ಇದೆ;  ಸಾಗರ ಪ್ರವಾಹಗಳು ಮತ್ತು ಬೀಸುವ ಮಾರುತಗಳು ಕೂಡ ವಾಯುಗುಣದ ಮೇಲೆ ಪ್ರಭಾವ ಬೀರುತ್ತವೆ. 

ಉಷ್ಣಾಂಶ: ಚಳಿಗಾಲದ ಸಮತಾಪ ರೇಖೆಗಳು ಪೂರ್ವ ಪಶ್ಚಿಮವಾಗಿದ್ದರೂ ಮಧ್ಯದಲ್ಲಿ ದಕ್ಷಿಣದ ಕಡೆಗೆ ಬಾಗಿವೆ: ಅಂದರೆ ತೀರ ಪ್ರದೇಶಗಳು ಬೆಚ್ಚಗಿದ್ದು, ಒಳಭಾಗ ಚಳಿಯಿಂದ ಕೂಡಿದೆ. 17.8º ಸೆ. ಸಮತಾಪ ರೇಖೆ ಮಹಾಸರೋವರಗಳ ದಕ್ಷಿಣಕ್ಕೂ ಹಬ್ಬಿದೆ. ಅಂದರೆ ಉತ್ತರಾರ್ಧ ಖಂಡ ಘನೀಭವನ ಉಷ್ಣತೆಗಿಂತಲೂ ಕಡಿಮೆ ಉಷ್ಣತೆ ಹೊಂದಿದೆ. ಪೆಸಿಫಿಕ್ ಉಷ್ಣಸಾಗರ ಶೀತಸಾಗರ ಪ್ರವಾಹ ಪಶ್ಚಿಮ ಕೆನಡ ತೀರದ ಬಳಿ ಹರಿಯುವುದರಿಂದ ಅದು ಪೂರ್ವ ತೀರಕ್ಕಿಂತಲೂ ಬೆಚ್ಚಗಿದೆ. ಪೂರ್ವ ತೀರದಲ್ಲಿ ಲ್ಯಾಬ್ರಡಾರ್ ಶೀತಸಾಗರ ಪ್ರವಾಹ ಹರಿಯುವುದರಿಂದ, ಆರ್ಕ್ಟಿಕ್ ಸಾಗರದ ತೀರಗಳು -11º ಸೆ. ಯಿಂದ -16.7º ಸೆ. ಉಷ್ಣಾಂಶ ಹೊಂದಿವೆ. ಅಂದರೆ ಹಿಮಾಚ್ಛಾದಿತವಾಗಿರುತ್ತವೆ. ಕ್ಯಾಲಿಫೋರ್ನಿಯ ಶೀತಸಾಗರ ಪ್ರವಾಹ ಪಶ್ಚಿಮ ತೀರದುದ್ದಕ್ಕೂ ಹರಿದು ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ. ಚಿನೂಕ್ ಎಂಬ ಬಿಸಿಗಾಳಿ ಆಲ್ಬರ್ಟ್ ಪ್ರಾಂತ್ಯದಲ್ಲಿ ಬೀಸುತ್ತದೆ. ಮಹಾಸಾರೋವರಗಳು ಪೂರ್ವತೀರಗಳನ್ನು ಬೆಚ್ಚಗಿಟ್ಟಿರುತ್ತವೆ. 

ಬೇಸಗೆಯಲ್ಲಿ ಖಂಡಾಂತರ ಪ್ರದೇಶ ಹೆಚ್ಚು ಉಷ್ಣತೆಯಿಂದ ಕೂಡಿರುತ್ತದೆ. ಪಶ್ಚಿಮದ ಪರ್ವತಾವಳಿ ಸಾಗರ ಪ್ರಭಾವದಿಂದ ಈ ಪ್ರದೇಶವನ್ನು ದೂರಮಾಡಿದೆ. ತೀರಪ್ರದೇಶಗಳು ಒಳಭಾಗಕ್ಕಿಂತ ತಂಪಾಗಿವೆ ಮಹಾಸರೋವರಗಳು ಸ್ವಲ್ಪಮಟ್ಟಿಗೆ ತಂಪು ಬೀರುತ್ತವೆ. ದಕ್ಷಿಣಾರ್ಧ ಖಂಡ ಹಾಗೂ ವೆಸ್ಟ್‌ ಇಂಡೀಸ್ ದ್ವೀಪಗಳು 44º ಗಿಂತ ಹೆಚ್ಚು ಜುಲೈ ಉಷ್ಣಾಂಶ ಹೊಂದಿರುತ್ತವೆ. ನೈರುತ್ಯದ ಒಳನಾಡಿನಲ್ಲಿ 50º ಗಿಂತಲೂ ಹೆಚ್ಚು ಉಷ್ಣಾಂಶವಿರುತ್ತದೆ.

ಮಾರುತಗಳು ಮತ್ತು ಮಳೆ: ಬ್ರಿಟಿಷ್ ಕೊಲಂಬಿಯ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನಗಳ ಆಗ್ನೇಯ ಪ್ರದೇಶದಲ್ಲಿ ಉಷ್ಣಸಾಗರ ಪ್ರವಾಹದಿಂದುಂಟಾದ ಮಾರುತಗಳಿಂದ ಮಳೆಯಾಗುತ್ತದೆ. ಪರ್ವತಗಳ ಇನ್ನೊಂದು ಕಡೆಯಲ್ಲಿ ಮಳೆ ಇಲ್ಲದೆ, ಮಳೆ ನೆರಳಿನ ಪ್ರದೇಶ ನಿರ್ಮಾಣವಾಗುತ್ತದೆ. ಉತ್ತರ ಅಮೆರಿಕದ ಪರ್ವತಮಯ ಪ್ರಸ್ಥಭೂಮಿಯ ದಕ್ಷಿಣಕ್ಕಿರುವ ಪ್ರದೇಶ ಇಂಥ ಮಳೆನೆರಳುನಾಡು. ಪೂರ್ವ ಕೆನಡ ಮತ್ತು ನ್ಯೂಫೌಂಡ್ಲೆಂಡ್ ಗಳಲ್ಲಿ ಸಾಮಾನ್ಯ ಮಳೆ ಮತ್ತು ಹಿಮ ಬೀಳುತ್ತವೆ. ಇದು ಆವರ್ತಮಾರುತಗಳ ಪ್ರಭಾವ. ಮಿಸಿಸಿಪ್ಪಿ ಕಣಿವೆಯ ವಿನಾಶಕರ ಬಿರುಗಾಳಿಗಳು ವೆಸ್ಟ್‌ ಇಂಡೀಸ್ ದ್ವೀಪಗಳು ಮತ್ತು ಗಲ್ಫ್‌ ಕೋಸ್ಟ್‌ಗಳಲ್ಲಿ ಹೆಚ್ಚು ಹಾನಿಯನ್ನು ಉಂಟುಮಾಡುತ್ತವೆ.

ಸ್ವಾಭಾವಿಕ ಸಸ್ಯವರ್ಗ
ವಾಯುಗುಣ ಮತ್ತು ಭೂಸ್ಥಿತಿಯನ್ನವಲಂಬಿಸಿರುತ್ತದಾದರೂ ಉತ್ತರ ಅಮೆರಿಕದ ಸಸ್ಯವರ್ಗ ಮನುಷ್ಯ ಪ್ರಯತ್ನದಿಂದ ಬದಲಾವಣೆ ಹೊಂದಿದೆ. ಎತ್ತರ ಮತ್ತು ವಾಯುಗುಣಕ್ಕೆ ಅನುಸಾರವಾಗಿ ವಿವಿಧ ರೀತಿಯ ಸಸ್ಯವರ್ಗಗಳನ್ನು ಈ ಖಂಡದಲ್ಲಿ ಕಾಣಬಹುದು.

ಕಾಡುಗಳು
ಉಷ್ಣತೆ ಮತ್ತು ಮಳೆ ಹೆಚ್ಚಾಗಿರುವ ಮೆಕ್ಸಿಕೊ, ಮಧ್ಯ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್ ದ್ವೀಪಗಳಲ್ಲಿ ನಿತ್ಯಹರಿದ್ವರ್ಣದ ಕಾಡುಗಳಿವೆ. ಹೆಚ್ಚು ಸೆಕೆ ಮತ್ತು ತೇವದಿಂದ ಕೂಡಿರುವ ತೀರಪ್ರದೇಶಗಳಲ್ಲಿ ಈ ಕಾಡುಗಳು ಒತ್ತೊತ್ತಾಗಿವೆ. ತಾಳೆಯ ಜಾತಿಯ ಮರ, ಮಹೋಗನಿ, ಲಾಗ್ವುಡ್ ಇತ್ಯಾದಿ ಮರಗಳು ಇಲ್ಲಿ ಬೆಳೆಯುತ್ತವೆ. ತಗ್ಗು ಬಯಲು ಮತ್ತು ಇಳಿಜಾರು ಪ್ರದೇಶಗಳಲ್ಲಿ ತೀವ್ರತರ ವ್ಯವಸಾಯ ರೂಢಿಯಲ್ಲಿದೆ. ಬಾಳೆಹಣ್ಣು, ಕಿತ್ತಲೆ, ಕಬ್ಬು, ಹೊಗೆಸೊಪ್ಪು, ಕಾಫಿ ಮತ್ತು ಕೋಕೋಗಳನ್ನು ಬೆಳೆಸುತ್ತಾರೆ.

ಆಗ್ನೇಯ ಅಮೆರಿಕದ ಸಂಸ್ಥಾನಗಳಾದ ಫ್ಲಾರಿಡ ಮತ್ತು ಗಲ್ಫ್‌ ಕೋಸ್ಟ್‌ಗಳಲ್ಲಿ ಅರ್ಧೋಷ್ಣ ವಲಯದ ನಿತ್ಯಹರಿದ್ವರ್ಣದ ಕಾಡುಗಳಿವೆ. ಕಡಿಮೆ ಉಷ್ಣಾಂಶದ ಚಳಿಗಾಲ ಮತ್ತು ಹೆಚ್ಚು ಬೇಸಗೆ ಕಾಲ ಇರುವುದಲ್ಲದೆ ವರ್ಷಪುರ್ತಿ ಮಳೆಯಾಗುವುದರಿಂದ ಉದ್ದನೆಯ ಎಲೆಗಳ ಪೀತದಾರು ಮತ್ತು ತಾಳೆ ಮರಗಳು ಹೆಚ್ಚಾಗಿವೆ. ಜೌಗು ಪ್ರದೇಶದಲ್ಲಿ ಸೈಪ್ರಸ್ಗಳಿವೆ. ಪೀತದಾರುವನ್ನು ಹಲಗೆ, ಬಾಗಿಲು ಮತ್ತು ಅಣೆಕಟ್ಟು ತಯಾರಿಕೆಗೆ ಉಪಯೋಗಿಸುತ್ತಾರೆ. 

ಪೂರ್ವ ಅಮೆರಿಕ ಸಂಸ್ಥಾನಗಳು ಮತ್ತು ಆಗ್ನೇಯ ಕೆನಡದಲ್ಲಿ ಚಳಿಗಾಲದಲ್ಲಿ ಎಲೆಗಳುದುರುವ ಮತ್ತು ಎಲೆ ಮೊನಚಾದ ಕಾಡುಗಳಿಂದ ಕೂಡಿದ ಮಿಶ್ರ ಕಾಡುಗಳಿವೆ. ದಕ್ಷಿಣಾರ್ಧ ಭಾಗದಲ್ಲಿ ಓಕ್, ಗಟ್ಟಿದಾರು ಮರ, ಸಂಪಿಗೆ ಜಾತಿಯ ಎಲೆಯುದುರುವ ಮರಗಳ ಕಾಡುಗಳಿವೆ. ಅಪಲೇಷಿಯನ್ ಪರ್ವತಗಳ ವಿನಾ ಉಳಿದೆಲ್ಲವೂ ವ್ಯವಸಾಯ ಪ್ರದೇಶ. ಚಳಿಗಾಲದ ಗೋದಿ, ಹೊಗೆಸೊಪ್ಪು, ಜೋಳ ಮತ್ತು ಹತ್ತಿ-ಇಲ್ಲಿನ ಮುಖ್ಯ ಬೆಳೆಗಳು. ಮೇಪಲ್ ಮತ್ತು ಮೊನಚು ಎಲೆಯ ಕಾಡುಗಳು ಇಲ್ಲಿವೆ. ಮರಗಳ ತಿರುಳಿನಿಂದ ಕಾಗದದ ತಯಾರಿಕೆಯಾಗುತ್ತದೆ. ಮಿಶ್ರ ವ್ಯವಸಾಯ, ಪಶುಪಾಲನೆ ಮತ್ತು ತೋಟಗಾರಿಕೆ ಇಲ್ಲಿನ ಜನರ ಮುಖ್ಯ ಕಸಬುಗಳು. ಕೆನಡದ ಹೆಚ್ಚು ಭಾಗ ಮೊನಚು ಎಲೆಯ ಕಾಡುಗಳಿಂದ ತುಂಬಿದೆ. ಈ ಕಾಡು ಅಟ್ಲಾಂಟಿಕ್ನಿಂದ ಪೆಸಿಫಿಕ್ ಸಾಗರದ ವರೆಗೆ 4,800 ಕಿಮೀ ಉದ್ದ ಹರಡಿದೆ. ಸರಾಸರಿ ಅಗಲ 950 ಕಿಮೀ. ಪೀತದಾರು, ಸ್ಪ್ರೂಸ್, ಭೂರ್ಜ, ಗುಗ್ಗಲ ಮರಗಳು ದಟ್ಟವಾಗಿ ಹರಡಿವೆ. ಬ್ರಿಟಿಷ್ ಕೊಲಂಬಿಯದ ಕಾಡುಗಳಲ್ಲಿ ಭವ್ಯವಾದ ಡಗ್ಲಾಸ್ ಫರ್ ಮರಗಳಿವೆ. ಇದು ಟಂಡ್ರ ಪ್ರದೇಶದ ದಕ್ಷಿಣದಲ್ಲಿದೆ.

ಹುಲ್ಲುಗಾವಲು
ಉತ್ತರ ಅಮೆರಿಕದ ಮಧ್ಯಭಾಗದಲ್ಲಿ ಪ್ರೈರಿ ಹುಲ್ಲುಗಾವಲಿದೆ. ಇದು ಮಧ್ಯಮ ಬಯಲಿನಿಂದ ಮೆಕ್ಸಿಕೊ ಕೊಲ್ಲಿಯವರೆಗೂ ಹರಡಿದೆ. ಪ್ರೈರಿಯ ಹೆಚ್ಚು ಭಾಗವನ್ನು ವ್ಯವಸಾಯ ಪ್ರದೇಶಗಳನ್ನಾಗಿ ಪರಿವರ್ತಿಸಿದ್ದಾರೆ. ಒಣ ಹವೆ ಇರುವ ಪ್ರದೇಶಗಳಲ್ಲಿ ಹೊಲದ ಬೆಳೆ ಹೆಚ್ಚಾಗಿರುತ್ತದೆ. ಅದಕ್ಕೆ ನೀರಾವರಿ ಆವಶ್ಯಕ. ಮಣ್ಣಿನ ಸವೆತದಿಂದ ಅನೇಕ ಪ್ರದೇಶಗಳು ಬಂಜರುಬಿದ್ದಿವೆ.
ಮರುಭೂಮಿ ಮತ್ತು ಅರೆ ಮರುಭೂಮಿ ಪ್ರದೇಶಗಳು: ಇವು ಕ್ಯಾಲಿಫೋರ್ನಿಯ ಕೊಲ್ಲಿಯಿಂದ ಉತ್ತರದ ಕಡೆಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳ ಪ್ರಸ್ಥಭೂಮಿಗಳ ಮುಖಾಂತರ ಮಧ್ಯ ಹಾಗೂ ಮುಖ್ಯ ರಾಕಿ ಪರ್ವತಶ್ರೇಣಿಗಳ ಮಧ್ಯದಲ್ಲಿ ದಕ್ಷಿಣಕ್ಕೆ ಮೆಕ್ಸಿಕೊವರೆಗೆ ಹರಡಿ ಪಶ್ಚಿಮ ಸಮಾನಾಂತರ ಶ್ರೇಣಿಗಳ ಮಧ್ಯದಲ್ಲಿರುವ ಬಯಲುಗಳನ್ನೂ ಒಳಗೊಂಡಿದೆ. ಮಳೆ ಅಪರೂಪವಾಗಿ ಬಿದ್ದರೂ ಬಿದ್ದ ಮಳೆ ಭಾರಿ ಸುಂಟರಗಾಳಿಗಳಲ್ಲಿ ಪರ್ಯವಸಾನವಾಗುತ್ತದೆ. ಇಬ್ಬನಿಯಿಂದ ಪಾಪಾಸುಕಳ್ಳಿ ಮತ್ತು ಜೋಷುವಾ ಮರಗಳು ಬೆಳೆಯುತ್ತವೆ. ನೀರಾವರಿ ಅನುಕೂಲ ಒದಗಿದರೆ ಇಲ್ಲಿ ಹಣ್ಣುಗಳನ್ನು ಬೆಳೆಯಬಹುದು.

ತಂಡ್ರ ಭಾಗ
ಖಂಡದ ಉತ್ತರದ ಅಂಚಿನಲ್ಲಿ ಉದ್ದಕ್ಕೂ ಚಳಿ ಬಹಳ ಹೆಚ್ಚು. ಇದು ಬಂಜರುಭೂಮಿ. ತೀಕ್ಷ್ಣವಾದ ಹಿಮದ ಬಿರುಗಾಳಿ ಬೀಸುತ್ತವೆ. ಇಂಥ ಪರಿಸ್ಥಿತಿಯಲ್ಲಿ ಕೇವಲ ಗಿಡ್ಡವಾಗಿ ಬೆಳೆಯುವ ಸಸ್ಯಗಳು ಬದುಕಿ ಉಳಿಯುತ್ತದೆ. ಪಾಚಿ, ಶಿಲಾವಲ್ಕ ಮತ್ತು ನೀರು ಹಬ್ಬೆ ಗಿಡಗಳು ಅನುಕೂಲವಾದ ಸ್ಥಳದಲ್ಲಿ ಬೆಳೆಯುತ್ತವೆ. ಕಿರುಬೇಸುಗೆಯಲ್ಲಿ ಸಸಿ, ಪೊದೆಗಳಲ್ಲೆಲ್ಲ ಆಕರ್ಷಕ ಹೂಗಳು ಮತ್ತು ವಲಸೆಗಾರ ಹಕ್ಕಿಗಳು ತುಂಬಿಕೊಂಡಿರುತ್ತವೆ. ಕೆಲವು ಕಡೆ ಜಿಂಕೆ ಮತ್ತು ಹಿಮಸಾರಂಗಗಳು ಇರುತ್ತವೆ.

ಮೆಡಿಟರೇನಿಯನ್ ವಾಯುಗುಣದ ಸಸ್ಯವರ್ಗ
ನಿತ್ಯ ಹರಿದ್ವರ್ಣದ ಕಾಡುಗಳು ಮತ್ತು ಕುರುಚಲು ಗಿಡಗಳು ಬೇಸಿಗೆ ಕಾಲದ ಹೆಚ್ಚು ಉಷ್ಣತೆಯನ್ನು ಸಹಿಸಿಕೊಳ್ಳುವ ಶಕ್ತಿ ಪಡೆದಿವೆ. ಈ ರೀತಿಯ ಸಸ್ಯವರ್ಗ ಮಧ್ಯ ಕ್ಯಾಲಿಫೋರ್ನಿಯದಲ್ಲಿದೆ. ಇದೇ ಮೆಡಿಟರೇನಿಯನ್ ಮಾದರಿಯ ಸಸ್ಯವರ್ಗ.

ನೈಸರ್ಗಿಕ ಸಂಪತ್ತು
ಐರೋಪ್ಯರು ಈ ಖಂಡವನ್ನು ಆಕ್ರಮಿಸಿದಾಗ ನೈಸರ್ಗಿಕ ಸಂಪತ್ತು ಹೇರಳವಾಗಿತ್ತು. ನೆಲಸಿಗರು ಅದರ ಶೋಷಣೆಗೆ ಕೈಹಾಕಿದರು. ಅದನ್ನು ತಡೆಗಟ್ಟಲು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ತೋಪುಗಳು, ಕಾಡುಗಳ ವಿಶಾಲ ಭಾಗಗಳು ಕ್ರಮೇಣ ನಾಶವಾದುವು. ಕಾಡು ಪ್ರಾಣಿಗಳ ಬೇಟೆ ಮತ್ತು ಮಣ್ಣು ಸವೆತಕ್ಕೆ ಒಳಗಾಗಿ ನಾಡಿಗೆ ಹೀನಸ್ಥಿತಿ ಉಂಟಾಯಿತು. 1930ರಲ್ಲಿ ಉಂಟಾದ ತೀವ್ರಕ್ಷಾಮಗಳಿಂದ ಪರಿಸ್ಥಿತಿ ಇನ್ನೂ ಉದ್ರೇಕಗೊಂಡಿತು. 20ನೆಯ ಶತಮಾನದ ಮೊದಲಲ್ಲಿ ಮೃಗಸಸ್ಯಸಂರಕ್ಷಣೆಯ ಕಾರ್ಯಕ್ರಮ ಗಳನ್ನು ಕೈಗೊಳ್ಳುವ ಪ್ರಯತ್ನಗಳು ನಡೆದು, ಈಗ ಪರಿಸ್ಥಿತಿ ಹತೋಟಿಗೆ ಬಂದಿದೆ.
ಜಲಶಕ್ತಿ: ಗೃಹೋಪಯೋಗ, ನೀರಾವರಿ, ಕೈಗಾರಿಕೆ, ವಾಹನ ಸಂಚಾರ, ಜಲವಿದ್ಯುತ್ ಶಕ್ತಿ, ವ್ಯರ್ಥ ಬಿಡುಗಡೆ-ಹೀಗೆ ಅಮೆರಿಕದ ಜಲಸಂಪತ್ತಿನದು ಆರು ದಾರಿ. ಜನಸಂಖ್ಯೆ ಮತ್ತು ಕೈಗಾರಿಕೆಗಳು ಹೆಚ್ಚಿದಂತೆ ಜಲಶಕ್ತಿಯ ಉಪಯೋಗವೂ ಹೆಚ್ಚಿದೆ. ಇದರ ಪರಿಣಾಮ ವಾಗಿ ಕಡಿಮೆ ಮಳೆ ಬಿದ್ದು ಒತ್ತಾದ ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ನೀರಿನ ಕೊರತೆ ಇದ್ದೇ ಇರುತ್ತದೆ.

ಉತ್ತರ ಅಮೆರಿಕದ ಜಲಮೂಲಗಳು
ಉತ್ತರ ಅಮೆರಿಕದ ಜಲಮೂಲಗಳು ಮೂರು : ಮಳೆ ಅಥವಾ ಹಿಮಪತನ: ನದಿ, ಸರೋವರ ಮತ್ತು ಸಮುದ್ರಗಳಿಂದ ಕೂಡಿದ ಭೂಮಿಯ ಮೇಲಿನ ನೀರು: ಚಿಲುಮೆ ಮತ್ತು ಬಾವಿಗಳಿಂದ ಮೇಲಕ್ಕೆ ಬರುವ ಅಂತರ್ಜಲ ಮೊದಲನೆಯ ಜಲಮೂಲದ ಹತೋಟಿ ಅಸಾಧ್ಯ. ಆದರೆ ಎರಡನೆಯ ರೀತಿಯ ಜಲವನ್ನು ಅಣೆಕಟ್ಟು ಮತ್ತಿತರ ವಿಧಾನಗಳಿಂದ ಸಂಗ್ರಹಿಸಲಾಗುತ್ತಿದೆ. ಸರೋವರ, ನದಿ ಮತ್ತಿತರ ಸ್ವಾಭಾವಿಕ ಜಲಾಶಯಗಳ ನೀರನ್ನು ಜನತೆಗೆ ಒದಗಿಸುತ್ತಿದೆ. ಸೂಕ್ತ ವಾಯುಗುಣ ಮತ್ತು ಇತರ ಅನುಕೂಲ ಪರಿಸ್ಥಿತಿಗಳು ಇರುವ ಕಡೆ ಅಂತರ್ಜಲವನ್ನು ಬಾವಿ ಮತ್ತು ಚಿಲುಮೆಗಳ ಮುಖಾಂತರ ಒದಗಿಸಲಾಗುತ್ತಿದೆ.
ಜನಸಾಂದ್ರತೆಯಿಂದ ತುಂಬಿರುವ ಈಶಾನ್ಯ ಅಮೆರಿಕ ಸಂಯುಕ್ತ ಸಂಸ್ಥಾನಗಳು, ಆಗ್ನೇಯ ಕೆನಡ ಮತ್ತು ಮೆಕ್ಸಿಕೊವಿನ ಮಧ್ಯದ ಪ್ರಸ್ಥಭೂಮಿಗಳಲ್ಲಿ ನಗರ ನೈರ್ಮಲ್ಯ ಮತ್ತು ಕೈಗಾರಿಕೆಗಳಿಗಾಗಿ ಬಹಳ ನೀರನ್ನು ವ್ಯರ್ಥ ಮಾಡುವುದರಿಂದ, ಬೇಕಾದಷ್ಟು ಜಲಸಂಗ್ರಹಣೆ ಅಸಾಧ್ಯ. ಹೆಚ್ಚು ಮಳೆ ಇದ್ದರೂ ಗೃಹೋಪಯೋಗಕ್ಕಾಗಿ ನೀರು ಒದಗಿಸುವುದೂ ಕಷ್ಟಸಾಧ್ಯವಾಗುತ್ತಿದೆ. ಅನೇಕ ಕಡೆಗಳಲ್ಲಿ ಗಡುಸು ನೀರೇ (ಹಾರ್ಡ್ ವಾಟರ್) ದೊರೆಯುತ್ತದೆ.

ನಗರಗಳು ಬೆಳೆದಿರುವ ಶುಷ್ಕಪ್ರದೇಶಗಳಲ್ಲಿನ ನೀರಿನ ಕೊರತೆ ಒಂದು ದೊಡ್ಡ ಸಮಸ್ಯೆ. ದಕ್ಷಿಣ ಕ್ಯಾಲಿಫೋರ್ನಿಯ ಇದಕ್ಕೊಂದು ನಿದರ್ಶನ. ಇಲ್ಲಿ ವ್ಯವಸಾಯಕ್ಕೂ ನಗರ ಕೆಲಸಗಳಿಗೂ ನೀರು ಒದಗಿಸಬೇಕಾಗಿದೆ. ಆದ್ದರಿಂದ ಕೊಲರಾಡೊ ನದಿಯಿಂದ, ಕಲ್ಲಿನಿಂದ ಎತ್ತರದಲ್ಲಿ ಕಟ್ಟಿರುವ ಕಾಲುವೆಗಳ ಮುಖಾಂತರ ನೀರನ್ನು ಸಾಗಿಸುವುದಲ್ಲದೆ, ಸಮುದ್ರಜಲವನ್ನು ಶುದ್ಧಿಮಾಡಿ ಒದಗಿಸುತ್ತಾರೆ. ಎತ್ತರದ ಪ್ರದೇಶಗಳಿಂದ ದೂರ ದೂರದ ನಗರಗಳಿವೆ. ಕೈಗಾರಿಕಾ ಕೇಂದ್ರಗಳಿಗೆ ಜಲಸಾರಿಗೆ ವ್ಯವಸ್ಥೆ ಇದೆ. ಇದೇ ರೀತಿ ಕಡಿಮೆ ಜನಸಂಖ್ಯೆ ಇರುವ ಪ್ರದೇಶಗಳ ಹೆಚ್ಚುವರಿ ನೀರನ್ನು ನೀರಿನ ಅನುಕೂಲವಿಲ್ಲದ ರಾಜಧಾನಿಗಳಿಗೆ ಒದಗಿಸುತ್ತಾರೆ.
ಉತ್ತರ ಮೆಕ್ಸಿಕೊ, ಅಮೆರಿಕ ಸಂಯುಕ್ತ ಸಂಸ್ಥಾನಗಳ ಪಶ್ಚಿಮ ಭಾಗ ಮತ್ತು ಪಶ್ಚಿಮ ಕೆನಡಗಳಂಥ ಶುಷ್ಕ ಪ್ರದೇಶಗಳಲ್ಲಿ ನೀರಾವರಿ ಕಾರ್ಯ ಬಹು ಮುಖ್ಯ. ಆದ್ದರಿಂದ ಚಳಿಗಾಲದ ಮಳೆಯನ್ನು ಹಿಡಿದಿಟ್ಟಿರುವ ಜಲಾಶಯಗಳ ನೀರನ್ನು ಬೇಸಿಗೆ ಬೆಳೆಗಳಿಗಾಗಿ ಉಪಯೋಗಿಸುತ್ತಾರೆ. ನದಿಗಳ ನೀರು ತಡೆದು ನಿರ್ಮಿಸಿದ ಅನೇಕ ಜಲಾಶಯಗಳು ಎತ್ತರದ ಪ್ರದೇಶಗಳಲ್ಲಿವೆ. ಆದ್ದರಿಂದ ವಿದ್ಯುತ್ ಉತ್ಪಾದನೆ ಕಡಿಮೆ ಖರ್ಚಿನಲ್ಲಿ ಸಾಕಾಗುವಷ್ಟು ಸಾಧ್ಯವಾಗಿದೆ.

ಖನಿಜಗಳು
ಪ್ರಾಚೀನ ಭೂ ಯುಗದ ಕಾಲದಲ್ಲಿ ಉತ್ತರ ಅಮೆರಿಕದ ವಿಶಾಲ ಪ್ರದೇಶಗಳನ್ನು ಸಮುದ್ರ ಮುಚ್ಚಿತ್ತು. ಜಲಶಿಲೆಗಳಲ್ಲಿ ಆಗ ಖನಿಜಾತ್ಮಕ ಇಂಧನಗಳು ಉಂಟಾದವು. ಇದು ಉತ್ತರ ಅಮೆರಿಕದ ಹೆಚ್ಚು ಕಡಿಮೆ ಎಲ್ಲ ಪ್ರದೇಶಗಳನ್ನೂ ಆಕ್ರಮಿಸಿದೆ. ಪಶ್ಚಿಮದಲ್ಲಿ ರಾಕಿ ಪರ್ವತಗಳು ಮೇಲೆದ್ದು ಭೂಪದರಗಳಲ್ಲಿ ಅನೇಕ ಬದಲಾವಣೆಗಳಾದವು. ಜಲಜಶಿಲೆಗಳಲ್ಲಿದ್ದ ದೊಡ್ಡ ಪ್ರಮಾಣದ ಇಂಧನಗಳನ್ನು ಅಗ್ನಿಪರ್ವತಗಳ ಬೆಂಕಿ ನಾಶಗೊಳಿಸಿ ತಾದರೂ ಆಗ ಉಂಟಾದ ಮಹತ್ತರ ಒತ್ತಡದ ಪರಿಣಾಮವಾಗಿ ಭೂ ಮತ್ತಿತರ ಶಿಲಾಸ್ತರಗಳಲ್ಲಿ ಲೋಹ ಖನಿಜಗಳು ಸೇರಿದುವು. ನೂತನವಾಗಿ ನಿರ್ಮಿತವಾದ ಶಿಲೆಗಳ ಮುಖಾಂತರ ನೀರು ಜಿನುಗಿ ಈ ಕಾರ್ಯಗತಿ ತೀವ್ರವಾಯಿತು. ಈ ಬದಲಾವಣೆಗಳಿಂದಲೇ ಉತ್ತರ ಅಮೆರಿಕದ ಪಶ್ಚಿಮ ಭಾಗಗಳಲ್ಲಿ ಶ್ರೇಷ್ಠ ಖನಿಜಗಳು ದೊರೆಯುವಂತಾಯಿತು. 
ಕೈಗಾರಿಕೆಗಳ ಮೂಲಖನಿಜಗಳಾದ ಕಲ್ಲಿದ್ದಲು, ಪೆಟ್ರೋಲಿಯಂ, ಕಬ್ಬಿಣಗಳು ಉತ್ತರ ಅಮೆರಿಕದಲ್ಲಿ ಹೇರಳವಾಗಿ ದೊರೆಯುತ್ತವೆ.

ಪ್ರಪಂಚದ ಕಲ್ಲಿದ್ದಲು ನಿಕ್ಷೇಪಗಳಲ್ಲಿ ಶೇ.55 ಭಾಗ ಉತ್ತರ ಅಮೆರಿಕದಲ್ಲಿದೆ. 1900 -59ರವರೆಗೆ ಅಮೆರಿಕ ಸಂಯುಕ್ತ ಸಂಸ್ಥಾನ ಪ್ರಪಂಚದ ಪ್ರಮುಖ ಕಲ್ಲಿದ್ದಲು ಉತ್ಪಾದನೆಯ ದೇಶವಾಗಿತ್ತು. ಶ್ರೇಷ್ಠಮಟ್ಟದ ಕಲ್ಲಿದ್ದಲು, ಆ್ಯಂಥ್ರಸೈಟ್ಗಳು ಜಗತ್ತಿನಲ್ಲಿ ಪೆನ್ಸಿಲ್ವೇನಿಯದಲ್ಲಿ ಮಾತ್ರ ದೊರೆಯುತ್ತವೆ. ಬಿಟುಮಿನಸ್ ಕಲ್ಲಿದ್ದಲು ಕಂಬರ್ಲೆಂಡ್, ಅಲಿಘನಿ ಪ್ರಸ್ಥಭೂಮಿಗ ಳಿರುವ ಅಪಲೇಷಿಯನ್ ಪ್ರದೇಶಗಳು, ಪೂರ್ವ ಒಳನಾಡು, ಪಶ್ಚಿಮ ಒಳನಾಡು ಮತ್ತು ಟೆಕ್ಸಸ್, ಮಿಚಿಗನ್ಗಳ ಒಳನಾಡು ಪ್ರದೇಶಗಳಲ್ಲಿ ದೊರೆಯುತ್ತವೆ. 

ಕೆನಡದ ಕಲ್ಲಿದ್ದಲು ನಿಕ್ಷೇಪಗಳು ಮುಖ್ಯವಾಗಿ ನೋವಾಸ್ಕೋಷಿಯ, ಆಲ್ಬರ್ಟ್, ಬ್ರಿಟಿಷ್ ಕೊಲಂಬಿಯಗಳಲ್ಲಿವೆ. ನೋವಾದಲ್ಲಿನ ಕಲ್ಲಿದ್ದಲು ಉತ್ತಮ ಮಟ್ಟದ್ದು.
ಪೆಟ್ರೋಲಿಯಂ ನಿಕ್ಷೇಪಗಳ ಬಗ್ಗೆ ಹೆಚ್ಚು ವಿವರಗಳು ದೊರೆಯದಿದ್ದರೂ, ಒಳ್ಳೆ ದರ್ಜೆಯ ನಿಕ್ಷೇಪಗಳು ಇವೆಯೆಂದು ತಿಳಿದುಬಂದಿದೆ. ಸಂಯುಕ್ತ ಸಂಸ್ಥಾನ ಪ್ರಮುಖ ಎಣ್ಣೆ ಉತ್ಪಾದನಾ ದೇಶ; ಅಲ್ಲಿ ಪ್ರಪಂಚದ ಶೇ.40 ಭಾಗವನ್ನು ಉತ್ಪಾದಿಸುತ್ತಾರೆ. ಪೆನ್ಸಿಲ್ವೇನಿಯ, ಕೆಂಟಕಿ, ಇಂಡಿಯಾನ, ಇಲಿನಾಯ್ಗಳಿಂದ ಕೂಡಿದ ಪೂರ್ವ ಪ್ರದೇಶ ಪ್ರಮುಖ ಎಣ್ಣೆ ಉತ್ಪಾದನಾ ವಿಭಾಗ. ಕಾನ್ಸಾಸ್, ಟೆಕ್ಸಸ್ಗಳ ಖಂಡಾಂತರ ಪ್ರದೇಶ ಜಗತ್ತಿನಲ್ಲೇ ಎಣ್ಣೆಗೆ ಪ್ರಸಿದ್ಧ ಸ್ಥಳವಾಗಿದೆ. ಕ್ಯಾಲಿಫೋರ್ನಿಯ ಮತ್ತು ಗಲ್ಫ್‌ಕೋಸ್ಟ್‌ 2ನೆಯ ಹಾಗೂ 3ನೆಯ ಸ್ಥಾನ ಪಡೆದಿವೆ. ಎರಡನೆಯ ಮಹಾಯುದ್ಧದ ಅನಂತರ ಕೆನಡ ಮತ್ತು ಅಲಾಸ್ಕಗಳು ಎಣ್ಣೆ ಉತ್ಪಾದಿಸಲಾರಂಭಿಸಿವೆ. 1910ರಿಂದ 1919ರ ವರೆಗೆ ಮೆಕ್ಸಿಕೊ ಪ್ರಪಂಚದ ಪೆಟ್ರೋಲಿಯಂ ತಯಾರಿಕೆಯಲ್ಲಿ ಎರಡನೆಯ ಸ್ಥಾನ ಪಡೆದಿತ್ತು. ಗಲ್ಫ್‌ಕೋಸ್ಟ್‌ನಲ್ಲಿ ಕೆಲವು ಮುಖ್ಯ ಎಣ್ಣೆ ಮೂಲಗಳಿವೆ.

ಪ್ರಪಂಚದ ಕಬ್ಬಿಣದ ಅದಿರಿನ ನಿಕ್ಷೇಪಗಳಲ್ಲಿ ಶೇ. 12 ಭಾಗ ಉತ್ತರ ಅಮೆರಿಕದಲ್ಲಿದೆ. ಸುಪೀರಿಯರ್ ಸರೋವರ ಪ್ರದೇಶ ಜಗತ್ತಿನ ¼ ಭಾಗದ ಕಬ್ಬಿಣದ ಅದಿರು ಒದಗಿಸುತ್ತದೆ. ಇದು ಉತ್ತಮ ಅದಿರು. ಪಂಚ ಮಹಾಸರೋವರಗಳು ಈ ಪ್ರದೇಶವನ್ನು ಅಪಲೇಷಿಯನ್ ಪ್ರದೇಶಗಳೊಂದಿಗೆ ಸೇರಿಸಿವೆ. ಪ್ರಪಂಚದ ಉತ್ತಮ ಮಟ್ಟದ ನಿಕ್ಷೇಪಗಳು ನ್ಯೂಫೌಂಡ್ಲೆಂಡ್ ಬಳಿಯ ಬೆಲ್ ದ್ವೀಪ, ಬರ್ನೂಟ್ ಕ್ರೀಕ್ ಮತ್ತು ಸುಪೀರಿಯರ್ ಸರೋವರಕ್ಕೆ ವಾಯವ್ಯದ ಪ್ರದೇಶಗಳಲ್ಲಿವೆ. ಕೋಬಾಲ್ಟ್‌, ಮಾಲಿಬ್ಡಿನಂ, ನಿಕ್ಕಲ್, ಟಂಗ್ಸ್ಟನ್ಗಳು ಸಂಯುಕ್ತ ಸಂಸ್ಥಾನ ಮತ್ತು ಮೆಕ್ಸಿಕೊಗಳಲ್ಲಿ ದೊರೆಯುತ್ತವೆ. ಗ್ರೇಟ್ ಬೇರ್ ಸರೋವರದ ತೀರಗಳಲ್ಲಿ ಜಗತ್ತಿನ ಶ್ರೇಷ್ಠ ಯುರೇನಿಯಂ ನಿಕ್ಷೇಪಗಳು ಹೇರಳವಾಗಿವೆ ಎಂದು ತಿಳಿದುಬಂದಿದೆ.

ವ್ಯವಸಾಯ ಮತ್ತು ಪಶುಪಾಲನೆ
ವಸಂತ ಋತುವಿನ ಗೋದಿಯನ್ನು ಮಧ್ಯ ಕೆನಡದಿಂದ ಮಧ್ಯ ಮಿಸಿಸಿಪ್ಪಿವರೆಗೂ ಬೆಳೆಯುತ್ತಾರೆ. ಇದರ ದಕ್ಷಿಣಕ್ಕೆ ಮುಸುಕಿನ ಜೋಳವನ್ನು ಹೆಚ್ಚಾಗಿ ಬೆಳೆಯುತ್ತಾರೆ. ಇದರ ದಕ್ಷಿಣದ ಪ್ರದೇಶಗಳಲ್ಲಿ ಜೋಳ ಮತ್ತು ಚಳಿಗಾಲದ ಗೋದಿ ಬೆಳೆಯಲು ಅನುಕೂಲವಿದೆ. ಇನ್ನೂ ದಕ್ಷಿಣಕ್ಕೆ ವಿಶಾಲವಾದ ಹತ್ತಿ ಬೆಳೆಯುವ ಪ್ರದೇಶವಿದೆ. ಅರ್ಧೋಷ್ಣವಲಯ ಪ್ರದೇಶ ಮೆಕ್ಸಿಕೊ ಕೊಲ್ಲಿಯ ಉದ್ದಕ್ಕೂ ಇದೆ; ಫ್ಲಾರಿಡ ಇದಕ್ಕೆ ಸೇರಿದೆ. ಇಲ್ಲಿ ಕಬ್ಬು, ಬತ್ತ, ಹಣ್ಣುಗಳನ್ನು ಬೆಳೆಯುತ್ತಾರೆ. 100º ಪಶ್ಚಿಮ ರೇಖಾಂಶದ ಪಶ್ಚಿಮಕ್ಕೆ ರಾಕಿ ಪರ್ವತಗಳವರೆಗೆ ಕುದುರೆ ಸಾಕುವುದೂ ಶುಷ್ಕ ವ್ಯವಸಾಯವೂ ಹೆಚ್ಚು. ಪಶುಪಾಲನೆ ಮಹಾಸರೋವರಗಳ ಸುತ್ತಮುತ್ತಣ ಪ್ರದೇಶ ಮತ್ತು ಸೇಂಟ್ಲಾರೆನ್ಸ್‌ ತಗ್ಗು ಬಯಲುಗಳಲ್ಲಿ ವಿಶೇಷವಾಗಿದೆ. ಮಧ್ಯ ಕ್ಯಾಲಿಫೋರ್ನಿಯದಲ್ಲಿ ಬೆಚ್ಚಗಿರುವ ಸಮಶೀತೋಷ್ಣ ವಲಯದ ಹಣ್ಣು ತರಕಾರಿಗಳನ್ನು ಬೆಳೆಯುತ್ತಾರೆ.

ಜನಸಂಖ್ಯೆ
ಈ ಖಂಡದಲ್ಲಿ ಪ್ರಪಂಚದ ಶೇ. 8 ರಷ್ಟು ಜನಸಂಖ್ಯೆ ಇದೆ. ಜನಸಂಖ್ಯೆಯ ಒತ್ತಡ ಯುರೋಪ್ ಮತ್ತು ಪೂರ್ವ ಏಷ್ಯಗಳಿಗಿಂತಲೂ ಕಡಿಮೆ. ಆದರೂ ಉತ್ತರ ಅಮೆರಿಕದ ಈಶಾನ್ಯ ಭಾಗ ಜಗತ್ತಿನ ನಾಲ್ಕು ಹೆಚ್ಚು ಜನಸಾಂದ್ರತೆ ಪ್ರದೇಶಗಳಲ್ಲಿ ಒಂದು. ಈ ಖಂಡ ಸರಾಸರಿ ಜನಸಾಂದ್ರತೆ ಪ್ರತಿ ಚ.ಕಿಮೀಗೆ 15 ಜನರು ಅ.ಸಂ.ಸಂ.ದಲ್ಲಿ ಇದು 28 ಮತ್ತು ಕೆನಡದಲ್ಲಿ 3 ಜನರು ಮಾತ್ರ.

ಸಂಯುಕ್ತ ಸಂಸ್ಥಾನದ ಈಶಾನ್ಯದಲ್ಲೂ ಕೆನಡದ ಆಗ್ನೇಯ ಭಾಗಗಳಲ್ಲೂ ಜನಸಾಂದ್ರತೆ ಹೆಚ್ಚು. ಇಲ್ಲಿಂದ ಒಳಗಡೆಗೆ ಮಹಾ ಮೈದಾನಗಳಲ್ಲಿ ದಕ್ಷಿಣದಲ್ಲಿ ಗಲ್ಫ್‌ಕೋಸ್ಟ್‌ವರೆಗೂ ಉತ್ತರದ ಆಂಟೇರಿಯೋದವರೆಗೂ ಇದು ಸಾಮಾನ್ಯ. ಮೆಕ್ಸಿಕೊ ನಗರದ ಸುತ್ತಣ ಪ್ರದೇಶದಲ್ಲೂ ತಕ್ಕಮಟ್ಟಿಗೆ ಜನಸಾಂದ್ರತೆಯಿದೆ. ವಾಷಿಂಗ್ಟನ್, ಓರೆಗಾನ್ ಸುತ್ತಣಪ್ರದೇಶ, ಸ್ಯಾನ್ಫ್ರಾನ್ಸಿಸ್ಕೊ ಕೊಲ್ಲಿಯ ಸುತ್ತಣ ಪ್ರದೇಶ ಹಾಗೂ ಲಾಸ್ ಏಂಜಲ್ಸ್‌ ಸುತ್ತಣ ಪ್ರದೇಶಗಳಲ್ಲಿ ಜನಸಾಂದ್ರತೆ ಬಹಳ ಕಡಿಮೆ. ಈ ಪ್ರದೇಶಗಳನ್ನು ಬಿಟ್ಟರೆ ಉಳಿದಿರುವ ಖಂಡವೆಲ್ಲ ಜನರಹಿತ ಪ್ರದೇಶವೆಂದೇ ಹೇಳಬೇಕು.

ಮೂಲನಿವಾಸಿಗಳು ಕೆನಡ ಮತ್ತು ಸಂಯುಕ್ತ ಸಂಸ್ಥಾನಗಳಲ್ಲಿ ಇದ್ದಾರೆ. ಉಳಿದವರೆಲ್ಲ ಪಶ್ಚಿಮ ಮತ್ತು ಉತ್ತರ ಐರೋಪ್ಯರು. ಸಂಯುಕ್ತ ಸಂಸ್ಥಾನದಲ್ಲಿ ಶೇ. 10 ರಷ್ಟು ನೀಗ್ರೋಗಳು. ಇಲ್ಲಿ ಜನರಲ್ಲಿ ಶೇ. 63 ರಷ್ಟು ಮಂದಿ ನಗರಗಳಲ್ಲೂ ಉಳಿದ ಶೇ. 20 ಮಂದಿ ಗ್ರಾಮೀಣ ಕೈಗಾರಿಕೆಗಳಲ್ಲೂ ನಿರತರಾಗಿದ್ದಾರೆ.	(ಕೆ.ಆರ್.ಆರ್.)

ಉತ್ತರ ಅಮೆರಿಕದ ಅವಿಷ್ಕಾರ, ಪರಿಶೋಧನೆ ಮತ್ತು ವಸತಿ ಚರಿತ್ರೆ
ಉತ್ತರ ಅಮೆರಿಕದಲ್ಲಿ ಈಗ ಮೂಲನಿವಾಸಿಗಳು ಅಲ್ಪಸಂಖ್ಯಾತರು; ಅಲ್ಲಿ ವಾಸಿಸುತ್ತಿರುವವರಲ್ಲಿ ಐರೋಪ್ಯ ಮೂಲದವರೇ ಅಧಿಕ; ನೀಗ್ರೋಗಳೂ ಯಥೇಚ್ಛ.

ಉತ್ತರ ಅಮೆರಿಕವನ್ನು ಮೊಟ್ಟ ಮೊದಲಿಗೆ ಕಂಡ ಐರೋಪ್ಯರೆಂದರೆ ಬಹುಶಃ ಸ್ಕಾಂಡಿನೇವಿಯದ ನಾರ್ಸ್‌ ಜನ. ಆ ದೇಶದಲ್ಲಿ ಒಮ್ಮೆ ಥಟ್ಟನೆ ಜನಸಂಖ್ಯೆಯ ಸ್ಫೋಟವಾದಾಗ, ಅಲ್ಲಿನ ಒಂದನೆಯ ಹ್ಯಾರೋಲ್ಡ್‌ ದೊರೆ ತನ್ನ ನಾಡಿನ ಶ್ರೀಮಂತರ ಮೇಲೆ ದಬ್ಬಾಳಿಕೆ ನಡೆಸಿದಾಗ ಆ ಜನ ಹೊರಬಿದ್ದರು. ನೆರೆದೇಶಗಳ ತೀರಪ್ರದೇಶಗಳ ಮೇಲೆ ದಾಳಿ ಮಾಡಿದರು. 9-10ನೆಯ ಶತಮಾನಗಳಲ್ಲಿ ಇಂಗ್ಲೆಂಡಿಗೆ ನುಗ್ಗಿದ ಡೇನರೂ ಫ್ರೆಂಚ್ ನದಿಗಳಲ್ಲಿ ಯಾನ ಮಾಡಿ ಫ್ರೆಂಚರನ್ನು ಥಳಿಸಿ ಅವರನ್ನು ಮತ್ತೆ ಅನಾಗರಿಕ ಸ್ಥಿತಿಗೆ ತಳ್ಳಿದವರೂ ರಷ್ಯಕ್ಕೂ ಏರಿ ಹೋಗಿ ಹಾವಳಿ ಮಾಡಿದ ವೆರಾಂಗಿಯನ್ನರೂ ಇವರೇ. 700-1100ರ ಅವಧಿಯಲ್ಲಿ ಇವರು ಉತ್ತರ ಅಮೆರಿಕದಲ್ಲೂ ಕಾಲಿಕ್ಕಿದ್ದಿರಬೇಕು. ಐಸ್ಲೆಂಡ್ ಇತಿವೃತ್ತಗಳಲ್ಲಿ ಇವರ ಈ ಪ್ರವಾಸಗಳ ಉಲ್ಲೇಖವಿದೆ. ಜಾರ್ನಿ ಹೆರ್ಜಾಫ್ಸನ್ ಐಸ್ಲೆಂಡಿನಿಂದ ಗ್ರೀನ್ಲೆಂಡ್ ಯಾನ ಮಾಡುತ್ತಿದ್ದಾಗ ಗಾಳಿ ಅವನ ನೌಕೆಯನ್ನು ಅಮೆರಿಕದ ತೀರಕ್ಕೆ ಹೊಡೆದುಕೊಂಡು ಹೋಗಿರಬೇಕು (985-6). ಮುಂದೆ (1002-3ರಲ್ಲಿ) ಲೀಫ್ಎರಿಕ್ಸನ್ ಗ್ರೀನ್ಲೆಂಡ್ನಿಂದ ಅಲ್ಲಿಗೆ ಹೋದ; ಸಮುದ್ರ ಕರೆಯ ಬಳಿಯಲ್ಲೇ ದಕ್ಷಿಣಾಮುಖವಾಗಿ ಸಾಗಿದ. ತಾರ್ಫಿನ್ ಕಾರ್ಲ್ಸೆವ್ನಿ ಮೂರು ಹಡಗುಗಳಲ್ಲಿ ಸಾಮಗ್ರಿಯನ್ನೂ ಪ್ರಾಣಿಗಳನ್ನೂ ತುಂಬಿಕೊಂಡು ಅಲ್ಲಿಗೆ ಹೋಗಿದ್ದ. ಅವನೊಂದಿಗೆ ಹೆಂಗಸರೂ ಹೋಗಿದ್ದರೆಂದು ಹೇಳಲಾಗಿದೆ.

ನಾರ್ಸ್ ಜನ ಎಲ್ಲೆಲ್ಲಿ ಸಂಚರಿಸಿದರೆಂಬ ಬಗ್ಗೆ ನಿರ್ದಿಷ್ಟವಾದ ದಾಖಲೆಗಳು ಹೆಚ್ಚಾಗಿ ದೊರಕಿಲ್ಲ. 15ನೆಯ ಶತಮಾನದಲ್ಲಿ ರಚಿತವಾದುದೆನ್ನಲಾದ ಈ ಪ್ರದೇಶದ ಭೂಪಟವೊಂದು ಸಿಕ್ಕಿದೆ. ಅಂತೂ ಕೊಲಂಬಸನ ಪೀಳಿಗೆಯ ಜನ ಇಲ್ಲಿಗೆ ಬರುವುದಕ್ಕೂ ಎಷ್ಟೋ ಮುಂಚೆಯೇ ಐರೋಪ್ಯರು ಇಲ್ಲಿ ಕಾಲಿಟ್ಟಿದ್ದರೆಂಬುದು ನಿಜ. ಆದ್ದರಿಂದ ವಾಸ್ತವವಾಗಿ ಹೇಳುವುದಾದರೆ 15ನೆಯ ಶತಮಾನದ ಪರಿಶೋಧಕರು ಉತ್ತರ ಅಮೆರಿಕವನ್ನು ತಲಪಿದಾಗ ಅವರು ಮಾಡಿದ್ದು ಅಮೆರಿಕದ ದರ್ಶನವಲ್ಲ, ಪುನರ್ದರ್ಶನವನ್ನು ಮಾತ್ರ.

15ನೆಯ ಶತಮಾನದಲ್ಲಿ ಐರೋಪ್ಯರು ಹೊಸ ಹೊಸ ಪ್ರದೇಶಗಳ ಅವಿಷ್ಕಾರ, ಪರಿಶೋಧನೆ ಹಾಗೂ ನೆಲಸಿಕೆಯಲ್ಲಿ ತೊಡಗಿದರು. ಹಿಂದಿನ ಕೆಲವು ಶತಮಾನಗಳಲ್ಲಿ ಐರೋಪ್ಯ ದೇಶಗಳಲ್ಲಿ ಸಂಭವಿಸಿದ್ದ ಅರ್ಥಿಕ ಬೆಳೆವಣಿಗೆಗಳಿಂದಾಗಿ ಅಲ್ಲಿ ಸಾಹಸ ಪವೃತ್ತಿ ಬೆಳೆದುಬಂದಿತ್ತು. ರಾಷ್ಟ್ರೀಯತೆಯ ಜಾಗೃತಿಯೊಂದಿಗೆ ಆಕಾಂಕ್ಷೆ ಹೆಚ್ಚಿತ್ತು. ಹೊಸ ನೆಲ, ಹೆಚ್ಚು ಸಂಪತ್ತು ದೊರಕೀತೆಂಬ ಆಸೆಯಿಂದ ಆ ದೇಶಗಳು ಜನರನ್ನು ಪರಿಶೋಧನೆಯಲ್ಲಿ ಪ್ರೋತ್ಸಾಹಿಸಿದರು. ಇದರ ಜೊತೆಗೆ ಕ್ರೈಸ್ತಧರ್ಮ ಪ್ರಚಾರದ ಹುಮ್ಮಸ್ಸೂ ಸೇರಿತು. ಪ್ರಾಟೆಸ್ಟಂಟ್ ಮತ್ತು ರೋಮನ್ ಕೆಥೊಲಿಕ್ ರಾಷ್ಟ್ರಗಳಲ್ಲೆ ಈ ವಿಚಾರದಲ್ಲಿ ಸ್ಪರ್ಧೆ ಹೆಚ್ಚಿತು. 
1462ರಲ್ಲಿ ಇಟಲಿಯ ಕ್ರಿಸ್ಟೋಫರ್ ಕೊಲಂಬಸ್ ಸ್ಪೇನಿನಿಂದ ಯಾತ್ರೆ ಹೊರಟು ಉತ್ತರ ಅಮೆರಿಕದ ಪೂರ್ವ ದ್ವೀಪಗಳನ್ನು ತಲಪಿದಾಗ ಈ ಖಂಡದ ಹೊಸ ಯುಗದ ಬಾಗಿಲು ದೊಡ್ಡದಾಗಿ ತೆರೆಯಿತು. ಸ್ಪ್ಯಾನಿಷ್ ಸಾಹಸಿಗಳು ಕೆರಿಬಿಯನ್, ಮೆಕ್ಸಿಕೊ ಖಾರಿ ಮತ್ತು ಸುತ್ತಣಮುತ್ತಣ ಪ್ರದೇಶಗಳ ಒಳಹೊಕ್ಕರು. ಅಲ್ಲಲ್ಲಿ ವಲಸೆಗಳು ಏರ್ಪಟ್ಟುವು. ಮೊದಮೊದಲು ವಲಸೆಗಾರರು ರೋಗದ ಉಪದ್ರವವನ್ನೂ ಮೂಲನಿವಾಸಿಗಳ ವಿರೋಧವನ್ನೂ ಎದುರಿಸಬೇಕಾಯಿತು. 1513ರಲ್ಲಿ ಬಾಲ್ಬೋವಾ ಯೋಧರ ಪಡೆಯೊಂದಿಗೆ ಪನಾಮ ಭೂಕಂಠವನ್ನು ತಲುಪಿ ಪೆಸಿಫಿಕ್ ದಂಡೆಯ ಮೇಲೆ ಉತ್ತರಾಭಿಮುಖವಾಗಿ ನಡೆದ. 1516ರಲ್ಲಿ ಡೈಗೋ ಎಂಬಾತನಿಗೆ ಕ್ಯೂಬ ಮಣಿಯಿತು. 1519ರಲ್ಲಿ ಎರ್ನಾಸ್ ಕೋರ್ಟೇಸ್ ಮೆಕ್ಸಿಕೊವಿನ ಒಳಹೊಕ್ಕ. ಮುಂದೆ ಅನೇಕ ಸ್ಪ್ಯಾನಿಷ್ ಸಾಹಸಿಗಳು ತಮ್ಮ ಹಿಂದಿನ ಪರಿಶೋಧಕರು ಹೋದ ದಿಕ್ಕುಗಳಲ್ಲೇ ನಡೆದು ಈ ಖಂಡದ ಒಳಭಾಗದಲ್ಲಿ ಸಂಚರಿಸಿದರು. ಇಂಕದ ಚಿನ್ನದ ಆಸೆಯೂ ಸಿಬೋಲದ ಸಪ್ತ ಸುವರ್ಣದ ನಗರಗಳ ಬಗ್ಗೆ ಅಲ್ಲಿನ ಇಂಡಿಯನ್ನರು ಹೇಳುತ್ತಿದ್ದ ಮೋಹಕ ಕಥೆಗಳೂ ಈ ಸಾಹಸಿಗಳನ್ನು ಹುರಿದುಂಬಿಸಿದುವು.
ಸ್ಪೇನಿನ ಜನ ಉತ್ತರ ಅಮೆರಿಕದ ದಕ್ಷಿಣಭಾಗದ ಪರಿಶೋಧನೆಯಲ್ಲಿ ತೊಡಗಿದ್ದಾಗ ಫ್ರೆಂಚರು, ಡಚ್ಚರು, ಇಂಗ್ಲಿಷರು ಮೂಂತಾದವರು ಉತ್ತರದ ಭಾಗಗಳಲ್ಲಿ ಕಾರ್ಯನಿರತರಾ ಗಿದ್ದರು. ಜಾನ್ ಕ್ಯಾಬಟ್ (ಇಂಗ್ಲಿಷ್), ಕಾತೆರ್ಯ್‌ (ಫ್ರೆಂಚ್), ಸರ್ ಫ್ರಾನ್ಸಿಸ್ ಡ್ರೇಕ್ (ಇಂಗ್ಲಿಷ್) ಇವರು ಮುಖ್ಯರು. ಪೆಸಿಫಿಕ್ ತೀರ, ಸೇಂಟ್ ಲಾರೆನ್ಸ್‌ ಪ್ರದೇಶ ಇವುಗಳಲ್ಲಿ ಕ್ರಮೇಣ ತಮ್ಮ ದೀರ್ಘಕಾಲದ ಮುಸುಕು ತೆರೆದು ಮೊಗ ತೋರಿಸಿದುವು.
ಫ್ರೆಂಚ್ ವ್ಯಾಪಾರಿಗಳು ಪೋರ್ಟ್ ರಾಯಲನ್ನು ಕಂಡುಹಿಡಿದದ್ದು 1605ರಲ್ಲಿ. ಮೂರು ವರ್ಷಗಳ ಅನಂತರ ಕ್ವಿಬೆಕ್ ಪ್ರಾಮುಖ್ಯಕ್ಕೆ ಬಂತು. ಫ್ರೆಂಚ್ ಕೆನಡ ಬೆಳೆಯಿತು. ತುಪ್ಪಳು ವ್ಯಾಪಾರ ಪ್ರಧಾನವಾಗಿತ್ತು. ಮೂಲನಿವಾಸಿಗಳನ್ನು ಕ್ರೈಸ್ತಧರ್ಮಕ್ಕೆ ಪರಿವರ್ತನೆ ಮಾಡುವ ಉದ್ದೇಶದಿಂದ ಬಂದವರೂ ದೇಶ ಪರ್ಯಟನೆಯಲ್ಲಿ ತೊಡಗಿದರು. ಆದರೆ ಇವರಿಗೆ ಪರಿವರ್ತನೆ ಕಾರ್ಯದಲ್ಲಿ ಅನೇಕ ಬಗೆಯ ವಿರೋಧಗಳು ಒದಗಿ ಬಂದುವು.

ಫ್ರೆಂಚರು ತಮ್ಮ ವ್ಯಾಪಾರ ಬೆಳೆವಣಿಗೆಗಾಗಿ ಇಂಗ್ಲಿಷರ ಸಹಕಾರ ಕೋರಿದರು. ಇಂಗ್ಲಿಷರಿಂದ ಹಡ್ಸನ್ ಬೇ ಕಂಪನಿ ಎಂಬ ಸಂಸ್ಥೆಯ ಸ್ಥಾಪನೆಯಾಯಿತು. ಈ ಪ್ರದೇಶದಲ್ಲಿ ಇಂಗ್ಲಿಷರು ಕ್ರಮೇಣ ತಮ್ಮ ಪ್ರಭಾವ ಬೆಳೆಸಿಕೊಂಡರು.

ಫ್ರೆಂಚರ ಆಸೆಯೂ ಬೆಳೆಯಿತು. ಉತ್ತರ ಅಮೆರಿಕದಲ್ಲಿ ತಮ್ಮ ಪ್ರಭುತ್ವ ಬೆಳೆಯಬೇಕೆಂಬ ಉದ್ದೇಶದಿಂದ ಅವರು ಮಿನೆಸೋಟಕ್ಕೆ ಬಂದು ಅಲ್ಲಿಂದ ಮಿಸಿಸಿಪ್ಪಿಯ ಮಾರ್ಗವಾಗಿ ವಿಸ್ಕಾನ್ಸಿನ್ಗೆ ಪ್ರಯಾಣ ಮಾಡಿದರು. ದಕ್ಷಿಣದಲ್ಲಿಂದ ಸ್ಪ್ಯಾನಿಷ್ ಪ್ರದೇಶದವರೆಗೂ ಮುಂದುವರಿದು ಇಂಗ್ಲಿಷರನ್ನು ಅಟ್ಲಾಂಟಿಕ್ ಕಡಲ ತೀರದ ಪ್ರದೇಶಕ್ಕೆ ಒತ್ತರಿಸಬೇಕೆಂಬುದು ಅವರ ಉದ್ದೇಶವಾಗಿತ್ತು. ಅವರು ಸ್ಪೇನ್ ವಸಾಹುತುಗಳೊಂದಿಗೆ ವ್ಯಾಪಾರ ಬಲಗೊಳಿಸಲು ಯತ್ನಿಸಿದರು.

ಇಂಗ್ಲಿಷರ ಹಡ್ಸನ್ ಬೇ ಕಂಪನಿ ಮೊದಮೊದಲು ಅಷ್ಟೇನೂ ಚುರುಕಾಗಿರಲಿಲ್ಲ. ಆದರೆ ಫ್ರೆಂಚರ ಚಟುವಟಿಕೆಗಳನ್ನು ನೋಡಿದ ಮೇಲೆ ಅದಕ್ಕೂ ಹುರುಪು ಬಂತು. ರಷ್ಯನ್ ವರ್ತಕರೂ 18ನೆಯ ಶತಮಾನದ ವೇಳೆಗೆ ಉತ್ತರ ಅಮೆರಿಕದ ಪಶ್ಚಿಮ ಕರಾವಳಿಯಲ್ಲಿ ವ್ಯಾಪಾರದಲ್ಲಿ ತೊಡಗಿದ್ದರು. 
ಐರೋಪ್ಯ ವಸಾಹತು ಸ್ಥಾಪನೆ: ಉತ್ತರ ಅಮೆರಿಕದಲ್ಲಿ ವಸಾಹತು ಸ್ಥಾಪಿಸುವ ಯತ್ನವನ್ನು ಮೊಟ್ಟಮೊದಲಿಗೆ ಮಾಡಿದವರೆಂದರೆ ಸ್ಪೇನಿಗರು. ತಾಯ್ನಾಡಿನಲ್ಲಿ ಹೆಚ್ಚು ಅವಕಾಶಗಳಿಲ್ಲದ್ದರಿಂದಲೋ ಸಾಹಸಪ್ರಿಯತೆಯಿಂದಲೋ ಐರೋಪ್ಯ ಸಂಸ್ಕೃತಿಯನ್ನೂ ಕ್ರೈಸ್ತಧರ್ಮವನ್ನೂ ಹರಡುವ ಉದ್ದೇಶದಿಂದಲೋ ಇವರು ಅಧಿಕ ಸಂಖ್ಯೆಯಲ್ಲಿ ಇಲ್ಲಿಗೆ ಬಂದರು. ಇವರು ಇಲ್ಲಿದ್ದ ಇಂಡಿಯನ್ ಗುಲಾಮರಿಂದ ದುಡಿಸಿಕೊಳ್ಳುತ್ತಿದ್ದರು. ಸ್ಪೇನ್ ಸರಕಾರ ಇದನ್ನು ನಿಷೇಧಿಸಿತಾದರೂ ಈ ಪದ್ಧತಿ ಉಳಿದುಕೊಂಡು ಬಂತು. ಆದರೆ ಮುಂದೆ ಅವರ ಜನಸಂಖ್ಯೆ ಕ್ಷೀಣಿಸತೊಡಗಿದಾಗ ಸ್ಪೇನಿಗರು ಆಫ್ರಿಕನ್ ಗುಲಾಮರನ್ನು ತಂದರು. 1570ರ ವೇಳೆಗೆ ಇಲ್ಲಿ 94,000 ಗುಲಾಮರಿದ್ದರು. 17ನೆಯ ಶತಮಾನದ ಅಂತ್ಯದ ವೇಳೆಗೆ ಮೆಕ್ಸಿಕೊ ಪ್ರದೇಶ ಇದರ ಅಧೀನಕ್ಕೆ ಬಂದಿತ್ತು. 18ನೆಯ ಶತಮಾನದಲ್ಲಿ ಇವರು ಪೆಸಿಫಿಕ್ ತೀರದಲ್ಲಿ ಉತ್ತರದ ಕಡೆಗೆ ಒತ್ತಿ ಸಾಗಿದರು.

ಬ್ರಿಟಿಷ್ ವಸಾಹತು ಬೆಳೆವಣಿಗೆ
ಉತ್ತರ ಅಮೆರಿಕದ ಪೂರ್ವ ಕರಾವಳಿಯ ಉದ್ದಕ್ಕೂ ಉತ್ತರ ಮೇನ್ನಿಂದ ಜಾರ್ಜಿಯದವರೆಗೂ ವೆಸ್ಟ್‌ ಇಂಡೀಸ್ ದ್ವೀಪಗಳಲ್ಲೂ ಬ್ರಿಟಿಷರು ತಮ್ಮ ವಸಾಹುತಗಳನ್ನು ಸ್ಥಾಪಿಸಿದರು. ವ್ಯಕ್ತಿಗಳೂ ಗುಂಪುಗಳೂ ಬ್ರಿಟಿಷ್ ದೊರೆಯಿಂದ ಹಕ್ಕು ಪಡೆದು ವಸಾಹತು ನಿರ್ಮಿಸಿಕೊಂಡು ಆಡಳಿತ ನಡೆಸಲು ಆರಂಭಿಸಿದರು. ಸಂಪತ್ತು ಗಳಿಸುವವರಿಗೂ ಸಾಹಸಪ್ರಿಯರಿಗೂ ಅಲ್ಲಿ ಸುವರ್ಣಾವಕಾಶವಿತ್ತು. ವ್ಯವಸಾಯ, ಮೀನುಗಾರಿಕೆ, ಹಡಗು ನಿರ್ಮಾಣ, ಹೊಗೆಸೊಪ್ಪು, ಅಕ್ಕಿ, ನೀಲಿ ಮುಂತಾದ ಪದಾರ್ಥಗಳ ವ್ಯಾಪಾರ ಈ ಮುಂತಾದುವು ಇವರ ಕೆಲಸ.

ವಲಸೆ ಹೊರಟ ಜನಸಮುದಾಯ ವಿಶಾಲ ಸಾಗರವನ್ನು ದಾಟಿ ಹೋಗಬೇಕಾಗಿತ್ತು. ಪಾತ್ರೆ, ಕಟ್ಟಡ ಸಾಮಗ್ರಿ, ದನಕರು, ಶಸ್ತ್ರಾಸ್ತ್ರಗಳೇ ಮೊದಲಾದ ಸಕಲ ರೀತಿಯ ಜೀವನ ಪರಿಕರಗಳನ್ನೂ ಜೊತೆಯಲ್ಲೇ ಒಯ್ಯಬೇಕಾಗಿತ್ತು. ಖಾಸಗಿ ಸಂಸ್ಥೆಗಳೇ ಈ ಮಹಾವಲಸೆಗಳಿಗೆ ಮುಂದಾಳುಗಳಾಗಿ ನಿಂತಿದ್ದುವು. ವರ್ಜೀನಿಯ, ಮ್ಯಾಸಚೂಸೆಟ್ಸ್‌ ವಸಾಹುತಗಳೆರಡೂ ನಿರ್ಮಿತವಾದದ್ದು ಸನ್ನದು ಕಂಪನಿಗಳಿಂದ. ಕನೆಕ್ಟಿಕಟ್ ಪ್ರಾಂತ್ಯದ ಭಾಗವಾಗಿ ಏರ್ಪಟ್ಟ ನ್ಯೂಹೇವನ್ ಎಂಬ ವಸಾಹತನ್ನು ಸ್ಥಾಪಿಸಲು ಧನಿಕ ವಲಸೆಗಾರರು ತಾವೇ ಧನಸಹಾಯ ಒದಗಿಸಿದರು. ನ್ಯೂ ಹ್ಯಾಂಪ್ಷೈರ್, ಮಿಯಾಮಿ, ಮೇರಿಲೆಂಡ್ ಮುಂತಾದ ಬೇರೆ ವಸಾಹತುಗಳಿಗೆ ಧನಿಕ ಜಮೀನ್ದಾರರು ತಾವೇ ಹಣಕೊಟ್ಟು ಒಕ್ಕಲುಗಳನ್ನೂ ಪರಿಚಾರಕರನ್ನೂ ಕಳುಹಿಸಿದರು. ಹೀಗೆ ಸ್ಥಾಪಿತವಾದ ನೆಲಸುನಾಡುಗಳಿಂದ ಕವಲೊಡೆದು, ಹಲವಾರು ವಸಾಹತುಗಳು ಕಾಲಾಂತರದಲ್ಲಿ ಹುಟ್ಟಿಕೊಂಡುವು. ಮತ್ತೆ ಕೆಲಕಾಲದಲ್ಲಿ ಯುರೋಪಿನ ಬೇರೆ ದೇಶಗಳಿಂದಲೂ ಅದೇ ಬಗೆಯ ವಲಸೆಗಳು ಅಮೆರಿಕಕ್ಕೆ ಬಂದವು. 1624ರಲ್ಲಿ ಡಚ್ಚರು ನ್ಯೂ ನೆದರ್ಲೆಂಡ್ ಎಂಬ ವಸಾಹತನ್ನು ನಿರ್ಮಿಸಿದರು.
ವರ್ಜೀನಿಯದಂತೆ ಮೇರಿಲೆಂಡ್ ವಸಾಹತು ಸಹ ಮುಖ್ಯವಾಗಿ ಕೃಷಿಪ್ರಧಾನ ಪ್ರದೇಶ. ಆದರೆ 18ನೆಯ ಶತಮಾನದ ಮಧ್ಯಭಾಗದೊಳಗೆ ಇವೆರಡೂ ವಸಾಹತುಗಳ ಜೀವನದಲ್ಲಿ ನೀಗ್ರೋ ಗುಲಾಮಗಿರಿ ಮಹತ್ತರ ಪರಿಣಾಮ ಬೀರಿತು. ಧನಿಕ ತೋಟಗಾರರು ನ್ಯಾಯ ಪರಿಪಾಲಕರಾಗಿ, ಸೇನಾನಿಗಳಾಗಿ, ವಿಧಾನಸಭೆಗಳ ಸದಸ್ಯರಾಗಿ ನಿರಂಕುಶಾಧಿಕಾರ ಚಾಲನೆಗೆ ತೊಡಗಿದರು. ಆದರೆ ರೈತ ಮುಂದಾಳುಗಳೂ ರಾಜಕೀಯ ಕ್ಷೇತ್ರಕ್ಕೆ ಕಾಲಿಕ್ಕಿದರು. ದಾಸ್ಯಮುಕ್ತರ ಅಧಿಕಾರ ಕರ್ತವ್ಯಗಳು ತೋಟದ ಮಾಲೀಕರ ಅಲ್ಪಜನಾಧಿಪತ್ಯದಿಂದ ಭಂಗವಾಗದಂತೆ ರೈತರ ಜಾಗೃತ ಚೇತನ ಎಚ್ಚರ ವಹಿಸುತ್ತಿತ್ತು. ದಕ್ಷಿಣದಲ್ಲಿ ಕೆರೋಲಿನ ದೊಡ್ಡ ರೇವು ಪಟ್ಟಣವಾಗಿ ಬೆಳೆಯಿತು. ಕೃಷಿ ವಾಣಿಜ್ಯಗಳೆರಡೂ ಅಲ್ಲಿ ಅಭಿವೃದ್ಧಿಗೆ ಬಂದವು.

ವಸಾಹತುಗಳ ರಾಜಕೀಯ ವಿಚಾರದಲ್ಲಿ ಇಂಗ್ಲಿಷ್ ಸರ್ಕಾರ ಕೈಹಾಕಿದ್ದು ಕೊಂಚ ಕಾಲ. ಕಳೆದ ಮೇಲೆ, ವಸಾಹತುಗಳ ಪರಮಾಧಿಕಾರವೆಲ್ಲ ಸ್ಥಾಪಕ ಕಂಪೆನಿಗಳಲ್ಲಿ ನಿಹಿತವಾಗಿತ್ತು. ಈ ಕಂಪನಿಗಳು ಇಂಗ್ಲೆಂಡಿನಲ್ಲೇ ನೆಲಸಿದ್ದವು. ಆದರೂ ಒಂದಲ್ಲ ಒಂದು ರೀತಿಯಲ್ಲಿ ನಿರುಪಾಧಿಕವಾಗಿ ನಡೆದುಬಂದ ಬಾಹ್ಯಾಡಳಿತ ಕ್ರಮೇಣ ಕುಸಿಯಿತು. ವರ್ಜೀನಿಯ ವಸಾಹತುಗಾರರಿಗೆ ಆಡಳಿತದಲ್ಲಿ ಪಾಲು ನೀಡಲು ಲಂಡನ್ (ವರ್ಜೀನಿಯ) ಕಂಪನಿ ತೀರ್ಮಾನಿಸಿತು. ತೋಟಗಳ ದಾಸ್ಯಮುಕ್ತ ನಿವಾಸಿಗಳು ಗವರ್ನರೊಡನೆ ಸಹಭಾಗಿಯಾಗಲು ಪ್ರತಿನಿಧಿಗಳನ್ನು ನೇಮಿಸುವಂತೆ 1919ರಲ್ಲಿ ಗವರ್ನರಿಗೆ ಆದೇಶ ನೀಡಿತು. ವಸಾಹತುಗಾರರಿಗೆ ರಾಜ್ಯಭಾರದಲ್ಲಿ ಭಾಗಿಗಳಾಗಲು ಅಧಿಕಾರವಿದೆಯೆಂಬ ವಾದಕ್ಕೆ ಕ್ರಮೇಣ ಒಪ್ಪಿಗೆ ದೊರೆಯ ತೊಡಗಿತು. ವಸಾಹತುಗಾರರು ರಾಜಶಾಸನ ಪೂರ್ವಕವಾಗಿ ಪಡೆದ ಈ ಪ್ರಾತಿನಿಧ್ಯಾಧಿಕಾರಕ್ಕೆ ಹೆಚ್ಚಿನ ಪ್ರಾಧಾನ್ಯವಿರಲಿಲ್ಲ. ಆದರೆ ವಸಾಹತುಗಾರರ ಪರಮಾಧಿಕಾರ ಸ್ಥಾಪನೆಗೆ ಕ್ರಮೇಣ ದಾನಶಾಸನಗಳೇ ಅಡಿಗಲ್ಲಾದುವು. ಇದರಿಂದ ಆರ್ಥಿಕ ವಿಚಾರಗಳು ಅವುಗಳ ಹಿಡಿತಕ್ಕೆ ಬಂದವು. ಕೊನೆಕೊನೆಗೆ ಆರ್ಥಿಕ ವಿಚಾರಗಳಲ್ಲಿ ಅಂತಿಮ ನಿಯಂತ್ರಣ ಈ ಸಭೆಗಳಲ್ಲೇ ಉಳಿಯುವಂತಾಯಿತು. ಇದರಿಂದ ಗವರ್ನರರ ಮತ್ತು ನಿಯುಕ್ತಾಧಿಕಾರಿಗಳ ವೇತನಕ್ಕೂ ಕಂದಾಯವನ್ನು ಬಳಸಕೂಡದೆಂದಾಯಿತು. ಜನಸಭೆಯ ಅಭಿಪ್ರಾಯಕ್ಕೆ ಅನುಗುಣವಾಗಿ ಈ ಅಧಿಕಾರಿಗಳು ನಡೆಯದೆ ಹೋದರೆ, ಆಡಳಿತ ವೆಚ್ಚಕ್ಕೆ ಒಪ್ಪಿಗೆ ನೀಡಲು ಜನಸಭೆ ನಿರಾಕರಿಸತೊಡಗಿತು. ಇದರಿಂದ ಗವರ್ನರುಗಳೂ ನಿಯುಕ್ತಾಧಿಕಾರಿಗಳೂ ಕ್ರಮೇಣ ಜನಸಭೆಯ ಅಭಿಪ್ರಾಯಕ್ಕೆ ತಲೆಬಾಗತೊಡಗಿದರು.

ಫ್ರೆಂಚರ ಪಾತ್ರ: ಕೆನಡದ ನ್ಯೂ ಫ್ರಾನ್ಸಿನಲ್ಲೂ ನೊವಸ್ಕಾಷದಲ್ಲಿನ ಅಕಾಡಿಯದಲ್ಲೂ ಫ್ರೆಂಚ್ ವಸಾಹತುಗಳ ನಿರ್ಮಾಣವಾಯಿತು. ಇದನ್ನು ಆಳುತ್ತಿದ್ದ ಫರ್ ವ್ಯಾಪಾರ ಕಂಪನಿಯ ಆಡಳಿತ ಅಸಮರ್ಪಕವಾಗಿದ್ದುದರಿಂದ ಫ್ರೆಂಚ್ ಸರಕಾರವೇ ಇದನ್ನು ವಹಿಸಿಕೊಂಡಿತು (1663). ಇಲ್ಲಿಗೆ ವಲಸೆ ಬರಲೊಪ್ಪಿದ ಫ್ರೆಂಚರಿಗೆ ನಾನಾ ಸವಲತ್ತುಗಳು ದೊರೆತವು. ಇಲ್ಲಿ ವಲಸೆ ಬಂದವರ ಮಡದಿಯರಾಗುವ ಮಹಿಳೆಯರನ್ನೊದಗಿಸುವ ಹೊಣೆಯನ್ನೂ ಸರಕಾರವೇ ವಹಿಸಿಕೊಂಡಿತು. 18ನೆಯ ಶತಮಾನದಲ್ಲಿ ಸ್ವಲ್ಪಕಾಲ ಫ್ರೆಂಚ್ ಅಪರಾಧಿಗಳನ್ನೂ ಇಲ್ಲಿಗೆ ರವಾನಿಸಲಾಗತ್ತಿತ್ತು. 17ನೆಯ ಶತಮಾನದ ಅಂತ್ಯಕಾಲದಿಂದ ಮುಂದೆ ಇಲ್ಲಿ ಜನಸಂಖ್ಯೆ ಬೆಳೆಯಿತು. ಲವೀಜಿಯಾನ 1969ರಲ್ಲಿ ಸ್ಥಾಪಿತವಾಗಿ ಫ್ರೆಂಚ್ ವ್ಯಾಪಾರಿಯೊಬ್ಬನ ಮಾಲೀಕತ್ವದಲ್ಲಿ ಬೆಳೆದು ಕೊನೆಗೆ ಫ್ರೆಂಚ್ ಪ್ರಭುತ್ವಕ್ಕೆ ಸೇರಿತು. 1760ರ ವೇಳೆಗೆ ಉತ್ತರ ಅಮೆರಿಕದ ಫ್ರೆಂಚ್ ವಸಾಹತುಗಳಲ್ಲಿ ಸುಮಾರು 80,000 ಮಂದಿ ಐರೋಪ್ಯರಿದ್ದರು.

ವಸಾಹತು ರಾಷ್ಟ್ರಗಳ ಮೇಲಾಟ: ತಮ್ಮ ರಾಷ್ಟ್ರೀಯರು ಎಲ್ಲೆಲ್ಲಿ ಹೋಗಿ ನೆಲಸುವರೋ ಅದೆಲ್ಲ ತಮ್ಮ ಅಧೀನ ಪ್ರದೇಶಗಳೊಂಬುದು ಯುರೋಪಿನ ಆಗಿನ ರಾಜರ ಭಾವನೆಯಾಗಿತ್ತು. ಇದರಿಂದ ನಾನಾ ಸಮಸ್ಯೆಗಳು ಉದ್ಭವಿಸಿದುವು. ಯುರೋಪಿನಲ್ಲಿ ಸಂಭವಿಸಿದ ಯುದ್ಧಗಳಿಂದಲೂ ಅಮೆರಿಕದಲ್ಲಿದ್ದವರ ಪರಸ್ಪರ ಮೇಲಾಟಗಳಿಂದಲೂ ನಾನಾ ಬಗೆಯ ಬದಲಾವಣೆಗಳಾದವು.
17ನೆಯ ಶತಮಾನದಲ್ಲಿ ಸ್ಪೇನಿಗರು ಉತ್ತರ ಅಮೆರಿಕದ ಮುಖ್ಯ ಭೂ ಪ್ರದೇಶದಲ್ಲಿ ಸಾಮ್ರಾಜ್ಯ ನಿರ್ಮಾಣ ಕಾರ್ಯದಲ್ಲಿ ನಿರತರಾಗಿದ್ದಾಗ ಇಂಗ್ಲಿಷರೂ ಫ್ರೆಂಚರೂ ಡಚ್ಚರೂ ಡೇನರೂ ಕೆರಿಬಿಯನ್ ದ್ವೀಪಗಳಲ್ಲಿ ಆಸಕ್ತರಾಗಿದ್ದರು. 1655ರಲ್ಲಿ ಬ್ರಿಟಿಷರು ಸ್ಪೇನಿಗೆ ಸೇರಿದ್ದ ಜಮೈಕವನ್ನು ಹಿಡಿದುಕೊಂಡರು. ಮುಂದೆ ಹಾಂಡುರಾಸೂ ಇವರ ವಶವಾಯಿತು. ಹೈಟಿಯ ನಿರ್ಜನ ಪ್ರದೇಶ ಫ್ರೆಂಚರ ಕೈಸೇರಿತು.
1664ರಲ್ಲಿ ಇಂಗ್ಲೆಂಡು ನ್ಯೂಇಂಗ್ಲೆಂಡನ್ನು ವಶಪಡಿಸಿಕೊಂಡಿತು. ಅಕಾಡಿಯ, ನ್ಯೂಫೌಂಡ್ಲೆಂಡ್, ಹಡ್ಸನ್ ಕೊಲ್ಲಿಯ ಬಳಿಯ ರೂಪಟ್ರ್ಸ್‌ಲೆಂಡ್ ಇವುಗಳ ಮೇಲಣ ಸ್ವಾಮ್ಯವನ್ನು ಫ್ರೆಂಚರಿಂದ ಪಡೆದುಕೊಂಡಿತು. 1763ರಲ್ಲಿ ಫ್ರೆಂಚರು ಮಿಸಿಸಿಪ್ಪಿ ನದಿಯ ಪೂರ್ವದ ಪ್ರದೇಶವನ್ನು ಇಂಗ್ಲಿಷರಿಗೂ ಪಶ್ಚಿಮದ್ದನ್ನು ಸ್ಪೇನಿಗೂ ಬಿಟ್ಟುಕೊಟ್ಟರು. ಬ್ರಿಟಿಷರು ಫ್ಲಾರಿಡವನ್ನು ಸ್ಪೇನಿನಿಂದ ಕಿತ್ತುಕೊಂಡರು. ಅಮೆರಿಕನ್ ಕ್ರಾಂತಿಯಾದ ಮೇಲೆ 1783ರಲ್ಲಿ ಕೆನಡದ ದಕ್ಷಿಣಕ್ಕೂ ಮಿಸಿಸಿಪ್ಪಿಯ ಪೂರ್ವಕ್ಕೂ ಇದ್ದ ಪ್ರದೇಶ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಸೇರಿತು. ಸ್ಪೇನು ಫ್ಲಾರಿಡವನ್ನು ಮತ್ತೆ ಗೆದ್ದಿತು. ಫ್ರಾನ್ಸಿನ ನೆಪೋಲಿಯನ್ 1800ರಲ್ಲಿ ಲವೀಜಿಯಾನವನ್ನು ಫ್ರೆಂಚರಿಂದ ಗೆದ್ದುಕೊಂಡ. ಆದರೆ ಹೈಟಿಯಲ್ಲೆದ್ದ ದಂಗೆಯಿಂದ ಅಮೆರಿಕದಲ್ಲಿ ವಸಾಹತು ಕಟ್ಟುವ ಕನಸಿಗೆ ಕಲ್ಲು ಬಿತ್ತು. ಕೊನೆಗೆ ಹೈಟಿ ಹಾಗೂ ಡಾಮಿನಿಕನ್ ಗಣರಾಜ್ಯಗಳು ಹುಟ್ಟಿದವು. ಅಮೆರಿಕ ಸಂಯುಕ್ತ ಸಂಸ್ಥಾನ 1803ರಲ್ಲಿ ಲವೀಸಿóಯಾನವನ್ನು ಫ್ರಾನ್ಸಿನಿಂದ ಕೊಂಡುಕೊಂಡಿತು. ಟೆಕ್ಸಸ್ ಮಾತ್ರ ಸ್ಪೇನಿನವರ ವಶದಲ್ಲೇ ಇತ್ತು. 

1810ರಿಂದ ಮುಂದೆ ಕ್ರಾಂತಿಯ ಫಲವಾಗಿ ಸ್ಪೇನಿನ ಅಮೆರಿಕನ್ ವಸಾಹತುಗಳು ಒಂದೊಂದಾಗಿ ಕೈಬಿಟ್ಟುವು. ಮೆಕ್ಸಿಕೊ, ಗ್ವಾಟೆಮಾಲ, ಎಲ್ ಸಾಲ್ವಡಾರ್, ಹಾಂಡುರಾಸ್, ನಿಕರಾಗ್ವ, ಕಾಸ್ಪರೀಕಗಳು ಉದ್ಭವಿಸಿದುವು.

1835ರಲ್ಲಿ ಟೆಕ್ಸಸಿನ ವಲಸೆಗಾರರು ಬಂಡಾಯವೆದ್ದು, ಸ್ವತಂತ್ರ್ಯರಾಗಿ 1845ರಲ್ಲಿ ಸಂಯುಕ್ತ ಸಂಸ್ಥಾನವನ್ನು ಸೇರಿದರು. ಅಮೆರಿಕ ಸಂಯುಕ್ತ ಸಂಸ್ಥಾನಕ್ಕೂ ಮೆಕ್ಸಿಕೊವಿಗೂ ನಡೆದ ಯುದ್ಧದ ಪರಿಣಾಮವಾಗಿ ಟೆಕ್ಸಸ್ ಮೇಲಣ ಅಧಿಕಾರವನ್ನು ಮೆಕ್ಸಿಕೊ ಬಿಟ್ಟುಕೊಟ್ಟಿದ್ದಲ್ಲದೆ ನ್ಯೂ ಮೆಕ್ಸಿಕೊವನ್ನೂ ಉತ್ತರ ಕ್ಯಾಲಿಫೋರ್ನಿಯವನ್ನೂ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬಿಟ್ಟುಕೊಟ್ಟಿತು. ಗಿಲಾ ನದಿಯ ದಕ್ಷಿಣಕ್ಕಿರುವ ಗ್ಯಾಡ್ಸ್‌ಡನ್ನನ್ನು 1853ರಲ್ಲಿ ಸಂಯುಕ್ತ ಸಂಸ್ಥಾನ ಪಡೆದುಕೊಂಡಿತು.

ಅಮೆರಿಕ ಸಂಯುಕ್ತ ಸಂಸ್ಥಾನಕ್ಕೂ ಉತ್ತರದ ಬ್ರಿಟಿಷ್ ಪ್ರಾಂತ್ಯಗಳಿಗೂ ನಡುವಣ ಗಡಿರೇಖೆಯನ್ನು 49ನೆಯ ಅಕ್ಷಾಂಶದ ಉದ್ದಕ್ಕೂ ಎಳೆಯಲಾಯಿತು (1846). ಅಲಾಸ್ಕದ ಗಡಿಯ ಬಗ್ಗೆ ರಷ್ಯಕ್ಕೂ ಬ್ರಿಟನ್ನಿಗೂ 1825ರಲ್ಲಿ ಒಪ್ಪಂದವಾಗಿತ್ತು. 1867ರಲ್ಲಿ ರಷ್ಯ ಅಲಾಸ್ಕವನ್ನು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಮಾರಿತು.

1860ರಿಂದ ಮುಂದಕ್ಕೆ ಬ್ರಿಟನ್ ಪ್ರಾಂತ್ಯಗಳಲ್ಲೂ ಬದಲಾವಣೆಗಳಾದವು. ನೊವಸ್ಕಾಷವೂ ನ್ಯೂಬನ್ಸ್‌ವಿಕ್ಕೂ ಕೆನಡವನ್ನು ಸೇರಿದುವು. ಹಡ್ಸನ್ ಬೇ ಕಂಪನಿಗೆ ಸೇರಿದ್ದ ರೂಪಟ್ರ್ಸ್‌ಲೆಂಡ್, ಬ್ರಿಟಿಷ್ ಕೊಲಂಬಿಯ, ಪ್ರಿನ್ಸ್‌ ಎಡ್ವರ್ಡ್ ದ್ವೀಪ, ನ್ಯೂಫೌಂಡ್ಲೆಂಡ್, ಲಾಬ್ರಡಾರ್ ಇವೂ ಕೆನಡ ಒಕ್ಕೂಟಕ್ಕೆ ಸೇರಿದವು.

1898ರಲ್ಲಿ ಸ್ಪೇನಿಗೂ ಅಮೆರಿಕಕ್ಕೂ ಯುದ್ಧ ನಡೆದಾಗ ಕ್ಯೂಬ ಸ್ಪೇನಿನಿಂದ ಸ್ವತಂತ್ರ್ಯ ಗೊಂಡಿತು. ಪೋರ್ಟೊರಿಕೊವೂ ಗ್ವಾಮ್, ಫಿಲಿಪೀನ್ಗಳೂ ಅಮೆರಿಕ ಸಂಯುಕ್ತ ಸಂಸ್ಥಾನದ ವಶವಾದವು. ಪನಾಮ ಕೊಲಂಬಿಯದಿಂದ ಬೇರ್ಪಟ್ಟು ಸ್ವಾತಂತ್ರ್ಯ ಘೋಷಿಸಿಕೊಂಡಿತು. 1917ರಲ್ಲಿ ಡೆನ್ಮಾರ್ಕಿನಿಂದ ವರ್ಜಿನ್ ದ್ವೀಪಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಕೊಂಡುಕೊಂಡಿತು. ಕಾಮನ್ವೆಲ್ತ್‌ ರಾಷ್ಟ್ರಕೂಟದೊಳಗೆ ವೆಸ್ಟ್‌ ಇಂಡೀಸ್ ಸಂಯುಕ್ತರಾಷ್ಟ್ರ 1958ರಲ್ಲಿ ಸ್ಥಾಪಿತವಾಗಿದ್ದು, 1962ರಲ್ಲಿ ಇದು ಮುರಿದುಹೋಯಿತು.

ಬಹುತೇಕ ಐರೋಪ್ಯರಿಂದಲೇ ಕೂಡಿರುವ ಉತ್ತರ ಅಮೆರಿಕದ ಹಿರಿಯ ದೇಶಗಳ ಜೀವನವಿಧಾನ ಹಾಗೂ ಸಂಸ್ಕೃತಿಗಳು ಐರೋಪ್ಯರ ವಿಧಾನ ಹಾಗೂ ಸಂಸ್ಕೃತಿಗಳಿಂದಲೇ ಬಂದಿದ್ದರೂ ಈಗ ಅವು ವಿಶಿಷ್ಟರೀತಿಯಲ್ಲಿ ಬೆಳೆಯುತ್ತಿವೆ.

ಉತ್ತರ ಅಮೆರಿಕ ದೇಶಗಳ ಇತಿಹಾಸದ ವಿವರಗಳ ಬಗ್ಗೆ ಆಯಾ ದೇಶಗಳ ಶೀರ್ಷಿಕೆಗಳನ್ನು ನೋಡಿ.	(ಎಂ.ಕೆ.ಬಿ.)

ಉತ್ತರ ಅಮೆರಿಕದ ಪುರಾತತ್ತ್ವ
1936ರಲ್ಲಿ ಪ್ರಾಕ್ತನ ಶಾಸ್ತ್ರಜ್ಞರು ನ್ಯೂ ಮೆಕ್ಸಿಕೊ ಪ್ರಾಂತ್ಯದ ಫಲ್ಸಮ್ ಎಂಬಲ್ಲಿ ಆಳಿದ ಕಾಡೆಮ್ಮೆಗಳ ಅವಶೇಷಗಳೊಂದಿಗೆ ಕಲ್ಲಿನ ಆಯುಧಗಳನ್ನು ಕಂಡುಹಿಡಿಯುವವರೆಗೂ ಅಮೆರಿಕದಲ್ಲಿ ಮಾನವ ಕೇವಲ ಕೆಲವು ಸಹಸ್ರ ವರ್ಷಗಳಿಂದ ಮಾತ್ರ ವಾಸಿಸುತ್ತಿದ್ದನೆಂದು ನಂಬಲಾಗಿತ್ತು. ಈ ಸಂಶೋಧನೆಯಿಂದ ದೊರಕಿದ ಮಾಹಿತಿಗಳು ಅತ್ಯಂತ ನೂತನ (ಪ್ಲಸ್ಟೊಸೀನ್) ಯುಗದ ಅಂತ್ಯಕಾಲದಿಂದ ಮಾನವರು ಇಲ್ಲಿ ಬೇಟೆಯಾಡಿ ಆಹಾರ ಸಂಗ್ರಹಿಸುವ ಹಂತದಲ್ಲಿದ್ದರೆಂದೂ ಮುಂದೆ ಕೆಲವರು ಏಷ್ಯದ ಸೈಬೀರಿಯದಿಂದ ಬೇರಿಂಗ್ ಜಲಸಂಧಿ ಮತ್ತು ಅಲಾಸ್ಕ ಮಾರ್ಗವಾಗಿ ಅಮೆರಿಕಕ್ಕೆ ಬಂದರೆಂದೂ ನಿರೂಪಿಸಿದೆ. ಆ ವೇಳೆಗೆ ಯುರೇಷ್ಯದಲ್ಲಿ ಆಧುನಿಕ ಮಾನವ (ಹೋಮೋಸೇಪಿಯನ್) ನೆಲೆಸಿದ್ದು ಪೂರ್ವಶಿಲಾಯುಗದ ಅಂತ್ಯಕಾಲದಲ್ಲಿ ಮುಂದುವರಿದಿದ್ದ ಸಂಸ್ಕೃತಿಯನ್ನನುಸರಿಸುತ್ತಿದ್ದುದ ರಿಂದ ಉತ್ತರ ಅಮೆರಿಕದಲ್ಲೂ ಮೊದಲಿನ ಕೈಗೊಡಲಿಯ ಅಥವಾ ತತ್ಸಮಾನಕಾಲದ ಇತರ ಸಂಸ್ಕೃತಿ ಕಂಡುಬರದಿರುವುದು ಸಹಜವಾಗಿದೆ. ಏಷ್ಯ, ಅಮೆರಿಕ ಖಂಡಗಳ ಮಧ್ಯೆ ಇರುವ ಬೆರಿಂಗ್ ಜಲಸಂಧಿಯ ಅಗಲ 90 ಕಿಮೀ. ಹಿಮಯುಗದಲ್ಲಿ ಸಮುದ್ರಮಟ್ಟ ತಗ್ಗಿದಾಗ ಇವುಗಳ ಮಧ್ಯೆ ಭೂಸೇತುವೆ ಏರ್ಪಟ್ಟು ಏಷ್ಯದ ಮಾನವನ ಮತ್ತು ಪ್ರಾಣಿಗಳ ಸಂತತಿಗಳು ಈ ಹೊಸ ಭೂ ಭಾಗವನ್ನು ಪ್ರವೇಶಿಸಿರಬಹುದೆಂದು ತಿಳಿದುಬಂದಿದೆ.

ಉತ್ತರ ಅಮೆರಿಕದಲ್ಲಿತ್ತೆಂದು ಈವರೆಗೆ ತಿಳಿದುಬಂದಿರುವ ಅತ್ಯಂತ ಪ್ರಾಚೀನ ಸಂಸ್ಕೃತಿಯ ಜನರು ಆಹಾರ ಸಂಗ್ರಹಣೆಯ ಹಂತದಲ್ಲಿದ್ದವರು. ಇವರು ಚಕಮಕಿಕಲ್ಲಿನ ತುಂಡು ಕತ್ತಿಗಳನ್ನೂ ಬರೆಯುವ ಆಯುಧಗಳನ್ನೂ ಚಾಕು ಮೊನೆಗಳನ್ನೂ ಬಳಸುತ್ತಿದ್ದರು. ಆ ಸಂಸ್ಕೃತಿಯ ಮಾಹಿತಿಗಳು ನವಾಡದ ತ್ಯುಲಿಸ್ಪ್ರಿಂಗ್ ಮತ್ತು ಟೆಕ್ಸಾಸ್ ಫ್ರೀಸೆನ್ಹ್ಯಾನ್ ಗುಹೆಯಲ್ಲಿ ಅತ್ಯಂತ ನೂತನ ಯುಗದ ಪ್ರಾಣಿಗಳ ಅವಶೇಷಗಳೊಂದಿಗೆ ದೊರಕಿವೆ. ಈ ಆಯುಧಗಳು ಯಾವುದೇ ನಿರ್ದಿಷ್ಟ ಉಪಯೋಗಕ್ಕೂ ಮಾಡಿದವುಗಳಾಗಿರಲಿಲ್ಲ. 

ಅನಂತರ ವಿಸ್ಕಾನ್ಸಿನ್ ಹಿಮಯುಗ ಕಾಲದಲ್ಲಿ ಉತ್ತರ ಅಮೆರಿಕದ ಆದಿಮಾನವರು ದೊಡ್ಡ ಪ್ರಾಣಿಗಳ ಬೇಟೆಯನ್ನು ಮುಖ್ಯ ಕಸಬನ್ನಾಗಿ ಮಾಡಿಕೊಂಡು ಹಿಮಯುಗದ ಆನೆ, ಒಂಟೆ ಮತ್ತು ಕಾಡುಕೋಣಗಳನ್ನು ಕೊಂದು ಜೀವಿಸುತ್ತಿದ್ದರು. ಆ ಜನರ ಆಯುಧಗಳಲ್ಲಿ ವಿಶಿಷ್ಟವಾದುವೆಂದರೆ 2-3 ಅಂಗುಲ ಉದ್ದದ ಈಟಿಯಾಕಾರದಲ್ಲಿದ್ದು ಮುಂಚಾಚಿ ಕೊಂಡಿರುತ್ತಿದ್ದ ಮೊನೆಗಳು ಮತ್ತು ಒರೆಯುವ ಆಯುಧಗಳು. ಕ್ಯಾಲರಾಡೊ, ಟೆಕ್ಸಾಸ್ ಮತ್ತು ನ್ಯೂ ಮೆಕ್ಸಿಕೊ ಪ್ರದೇಶಗಳಲ್ಲಿ ಬಹುವಾಗಿ ದೊರಕಿರುವ ಈ ಅವಶೇಷಗಳು ಸಾಂಡಿಯ ಗುಹೆಯಲ್ಲಿ ವಿಶೇಷವಾಗಿರುವುದರಿಂದ ಈ ಸಂಸ್ಕೃತಿಯನ್ನು ಸಾಂಡಿಯ ಸಂಸ್ಕೃತಿಯೆಂದೂ ಈ ಮೊನೆಗಳನ್ನು ಸಾಂಡಿಯ ಮೊನೆಗಳೆಂದೂ ಕರೆಯಲಾಗಿದೆ. ಈ ಸಂಸ್ಕೃತಿ ಬಹುಶಃ ಪ್ರ.ಶ.ಪು. 15,000 ವರ್ಷಗಳಷ್ಟು ಹಳೆಯದು.

ಅನಂತರದ ಸಂಸ್ಕೃತಿಗಳಲ್ಲಿ ಕ್ಲೋವಿಸ್ ಮೊನೆಗಳು ವಿಶಿಷ್ಟವಾಗಿರುವ ಕ್ಲೋವಿಸ್ ಸಂಸ್ಕೃತಿಯ ಅವಶೇಷಗಳು ರಾಕಿ ಪರ್ವತದ ಪೂರ್ವದಲ್ಲಿ ಎಲ್ಲ ಪ್ರದೇಶಗಳಲ್ಲೂ ಮೈದಾನ ಪ್ರದೇಶಗಳಲ್ಲೂ ಕಂಡುಬಂದಿವೆ. ಈಟಿಯಾಕಾರದ ಈ ಮೊನೆಗಳ ಉದ್ದ 76ಮಿಮೀ. ಅಥವಾ ಅದಕ್ಕೂ ಹೆಚ್ಚು. ಇವುಗಳ ಪಾಶರ್ವ್‌ಗಳೆರಡೂ ಸಮಾನಾಂತರವಾಗಿಯೋ ಅಲ್ಪಸ್ವಲ್ಪ ಬಾಗಿದಂತೆಯೋ ಇರುತ್ತಿದ್ದುವು. ಈ ಸಂಸ್ಕೃತಿಯ ಕಾಲವನ್ನು ನಿರ್ಣಯಿಸಲಾಗಿಲ್ಲ. ಆದರೆ ಇದರ ಅನಂತರದ ಫಾಲ್ಸಮ್ ಸಂಸ್ಕೃತಿ ಸು. 10,000 ವರ್ಷ ಹಳತೆಂದು ಇಂಗಾಲ-14 ಕಾಲನಿರ್ಧರಣ ರೀತಿಯಿಂದ ತಿಳಿದುಬಂದಿರುವುದರಿಂದ ಈ ಸಂಸ್ಕೃತಿ ಅದಕ್ಕೂ ಹಳತೆಂದು ಖಂಡಿತವಾಗಿ ಹೇಳಬಹುದು.

ಫಾಲ್ಸಮ್ ಸಂಸ್ಕೃತಿ ಉತ್ತರ ಅಮೆರಿಕದ ಪ್ರಾಕ್ತನ ಸಂಸ್ಕೃತಿಗಳಲ್ಲೆಲ್ಲ ಹೆಚ್ಚು ಪ್ರಸಿದ್ಧ. ನ್ಯೂ ಮೆಕ್ಸಿಕೊದಲ್ಲಿರುವ ಈ ನೆಲೆಯಲ್ಲಿನ ಅವಶೇಷಗಳ ಪೈಕಿ ಈಟಿಯಾಕಾರದ ಸುಂದರ ಮೊನೆಗಳು ಸಿಕ್ಕಿವೆ. ಈ ಮೊನೆಗಳ ಅಡಿಭಾಗ ಅರ್ಧನಿಮ್ನ ರೇಖೆ (ಕಾನ್ಕೇವ್) ಅಂದರೆ ಆಚೀಚೆ ಕಿವಿಯನ್ನು ಹೋಲುವ ಉಬ್ಬು, ಇವುಗಳ ಉದ್ದ ಸು. 50ಮಿಮೀ. ಇವುಗಳ ಉದ್ದಕ್ಕೂ ಅರೆಗೊಳವೆಯಾಕಾರದ ತಗ್ಗುಗಳಿರುವುದರಿಂದ ನೋಡಲು ಹೆಚ್ಚು ಸುಂದರ. ಬೇಟೆಯ ಭರ್ಜಿ ಮೊನೆಗಳಾಗಿ ಇವುಗಳ ಉಪಯೋಗ. ಅಳಿದುಹೋದ ಪ್ಲಿಸ್ಟೊಸೀನ್ ಯುಗದ ಪ್ರಾಣಿಗಳ ಅವಶೇಷಗಳೊಂದಿಗೆ ದೊರಕಿರುವುದರಿಂದಲೂ ಇಂಗಾಲ-14 ರೀತಿಯಿಂದ ಕಾಲನಿರ್ಣಯ ಮಾಡಿರುವುದರಿಂದಲೂ ಈ ಸಂಸ್ಕೃತಿ ಪ್ರ.ಶ.ಪು. 10,000ದ್ದು ಅಥವಾ ಇನ್ನೂ ಮೊದಲಿನದು ಎಂಬುದು ನಿಸ್ಸಂದೇಹ. ಈ ಸಂಸ್ಕೃತಿಯ ಅವಶೇಷಗಳು ಉತ್ತರ ಅಮೆರಿಕದ ದೊಡ್ಡ ಮೈದಾನ ಪ್ರದೇಶಗಳಲ್ಲಿ ಮಾತ್ರ ಕಂಡುಬಂದಿವೆ.

ಫಾಲ್ಸಮ್ ಸಂಸ್ಕೃತಿಯ ಅನಂತರದ ಅದೇ ಬಗೆಯ ಆದರೆ ಅಷ್ಟು ಸುಂದರವಲ್ಲದ ಮೊನೆಗಳನ್ನುಪಯೋಗಿಸುತ್ತಿದ್ದ ಸಂಸ್ಕೃತಿಯ ಅವಶೇಷಗಳು ಇನ್ನೂ ಹಲವೆಡೆಗಳಲ್ಲಿ ದೊರಕಿವೆ. ಇವುಗಳಲ್ಲಿ ಅಂಗೊಸ್ಟುರ, ಸ್ಕಾಟ್ಸ್‌ಬಫ್, ಪ್ಲೇನ್ವ್ಯೂ ಮತ್ತು ಈಡನ್ ಸಂಸ್ಕೃತಿಗಳು ಗಮನಾರ್ಹ, ಇವುಗಳ ಕಾಲ ಸ್ಥೂಲವಾಗಿ ಪ್ರ.ಶ.ಪು. 4000-2000. ಪ್ಲೇನ್ ವ್ಯೂ ಸಂಸ್ಕೃತಿಗೆ ಸೇರಿದ ಮೊನೆಗಳು ಕ್ಲೋವಿಸ್ ಮೊನೆಗಳನ್ನೇ ಹೋಲುತ್ತವೆ. ಆದರೆ ಅವುಗಳ ಮೇಲೆ ಅರ್ಧ ನಿಮ್ನರೇಖೆಯ ತಗ್ಗುಗಳಿಲ್ಲ. ಸ್ಕಾಟ್ಸ್‌ಬಫ್ ಮೊನೆಗಳಲ್ಲಿ ಸಮಾನಾಂತರದ ಚಕ್ಕೆಗಳನ್ನು ತೆಗೆದಿದೆ. ಅವುಗಳಲ್ಲಿ ಅಗಲವಾದ ಅಡಿ ಭಾಗಗಳಿವೆ. ಈಡನ್ ಮೊನೆಗಳು ಹೆಚ್ಚು ಉದ್ದ. ಅವುಗಳ ಒಂದು ಪಾಶರ್ವ್‌ ಭುಜಾಕಾರ. ಚಾಕುಗಳಂತೆ ಅವುಗಳ ಉಪಯೋಗ.

ಕ್ರಮೇಣ ಹಿಮಗಡ್ಡೆ ಕರಗಿದಾಗ ತೆರವಾದ ಮಾರ್ಗವನ್ನನುಸರಿಸಿದ ಈ ಜನ ಉತ್ತರ ಅಮೆರಿಕದ ಪೂರ್ವ ದಕ್ಷಿಣ ಭಾಗಗಳಲ್ಲಿ ಹರಡಿದರು. ಉತ್ತರ ಅಮೆರಿಕದ ಪೂರ್ವ ಪ್ರದೇಶಗಳಲ್ಲಿ ಹರಡಿದ ಸಂಸ್ಕೃತಿಯನ್ನು ಪುರಾ ಸಂಸ್ಕೃತಿ (ಆರ್ಕೇಯಿಕ್)ಯೆಂದು ಹೆಸರಿಸಲಾಗಿದೆ. ಈ ಸಂಸ್ಕೃತಿಯ ಕಾಲ ಪ್ರಶ.ಪು. 1ನೆಯ ಸಹಸ್ರಮಾನವೆಂಬುದು ಪುರಾತತ್ತ್ವಜ್ಞರ ನಿರ್ಣಯ. ನಿಸರ್ಗ ಸಹಜವಾದ ಸಸ್ಯಮೂಲ ಆಹಾರ ಸಂಗ್ರಹಣೆ, ಬೇಟೆ ಮತ್ತು ಮೀನುಗಾರಿಕೆಗಳಿಂದ ಈ ಜನರ ಜೀವನ ಸಾಗುತ್ತಿತ್ತು. ಕೆಲವಾರು ಆಯುಧಗ ಳನ್ನು ನುಣುಪು ಮಾಡಲಾಗುತ್ತಿತ್ತು. ತಾಮ್ರದಿಂದ ಮಾಡಿದ್ದ ಕೊರೆಯುವ ಆಯುಧಗಳನ್ನು ಇವರು ವಿರಳವಾಗಿ ಬಳಸುತ್ತಿದ್ದರು. ಚಾಕು ಮತ್ತು ಮುಂಚಾಚಿದ ಭರ್ಜಿ ಮೊನೆಗಳನ್ನೂ ಹರಿತವಾದ ಆಯುಧಗಳನ್ನೂ ಇವರು ಬಳಸುತ್ತಿದ್ದರೆಂಬುದೂ ಕಂಡುಬಂದಿದೆ. ಈ ಜನರ ಆಯುಧಗಳ ಮೊನೆಗಳು ದೊಡ್ಡವು. ಅಡಿಯಲ್ಲಿ ಹಿಡಿ. ಇವರು ನಾಯಿ ಸಾಕುತ್ತಿದ್ದರು. ವ್ಯಾಪಾರವೂ ತಕ್ಕಮಟ್ಟಿಗೆ ರೂಢಿಯಲ್ಲಿತ್ತು. ಸತ್ತವರ ದೇಹಗಳಿಗೆ ಕೆಮ್ಮಣ್ಣು ಲೇಪಿಸಿ, ಈ ಹೆಣಗಳನ್ನು ಗುಂಡಿಗಳಲ್ಲಿ ಕೂರಿಸಿಯೊ ಮಡಿಸಿಟ್ಟೊ ಹೂಳುವುದು ಇವರ ಪದ್ಧತಿ.
ರಾಕಿ ಪರ್ವತಗಳ ಪಶ್ಚಿಮದ ಮೈದಾನ ಪ್ರದೇಶಗಳಲ್ಲೂ ನೈರುತ್ಯ ಭಾಗಗಳಲ್ಲೂ ಇದ್ದ ಜನಕ್ಕೆ ವ್ಯವಸಾಯ ಗೊತ್ತಿರಲಿಲ್ಲ. ಕಾಡಿನ ಗಿಡಮರಗಳಿಂದ ಆಹಾರ ಸಂಗ್ರಹಿಸಿಯೂ ಆಗಾಗ ಕಾಡುಕೋಣ, ಜಿಂಕೆ, ಕಾಡುಕುರಿ, ತೋಳ, ಇಲಿ ಮುಂತಾದ ಪ್ರಾಣಿಗಳನ್ನು ಬೇಟೆಯಾಡಿಯೂ ಬದುಕುತ್ತಿದ್ದರು. ಬೇಟೆಗೆ ಭರ್ಜಿಗಳನ್ನೂ ಬಲೆಗಳನ್ನೂ ಬಳಸುವುದು ರೂಢಿ. ಇವರಲ್ಲಿ ಕಲ್ಲಿನ ಮೊನೆಗಳಿಗೆ ಪ್ರಾಮುಖ್ಯವಿರಲಿಲ್ಲ. ತುಂಡು ಕತ್ತಿ, ಒರೆಯುವ ಆಯುಧ, ಅರೆಯುವ ಕಲ್ಲು, ಇವು ಪ್ರಮುಖ ಉಪಕರಣಗಳು. ವಾಸ ಸಾಮಾನ್ಯವಾಗಿ ಗುಹೆಗಳಲ್ಲಿ-ಆದ್ದರಿಂದ ಇವರ ಅವಶೇಷಗಳು ಸುರಕ್ಷಿತವಾಗಿ ದೊರಕಿವೆ. ಈ ಜನರ ಸಂಸ್ಕೃತಿಗಳನ್ನು ಮರುಭೂಮಿ (ಡೆಸರ್ಟ್‌) ಸಂಸ್ಕೃತಿಗಳೆಂದು ಕರೆಯಲಾಗಿದೆ. ಪ್ರ.ಶ. ಪು.2000ದಲ್ಲಿ ಪ್ರಾರಂಭವಾಗಿ ಇತ್ತೀಚಿನವರೆಗೂ ಇವು ರೂಢಿಯಲ್ಲಿದ್ದವು.

ನವಾಡದ ತ್ಯುಲಿಸ್ಪ್ರಿಂಗ್ ಎಂಬಲ್ಲಿ ಸತ್ತ ಪ್ರಾಣಿಗಳ ಅವಶೇಷಗಳೊಂದಿಗೆ ಚಕ್ಕೆ ಕಲ್ಲಿನ ಮತ್ತು ಕೆಲವು ಒರಟು ಕಲ್ಲಿನ ಆಯುಧಗಳೂ ದೊರಕಿವೆ. ಅದೇ ಪ್ರದೇಶದ ಜಿಪ್ಸಮ್ ಗುಹೆಯಲ್ಲಿ ದೊರಕಿದ ಆಯುಧಗಳೂ ಉಪಕರಣಗಳೂ ಸತ್ತ ಪ್ರಾಣಿಗಳ ಅವಶೇಷಗಳೂ ಇಂಗಾಲ-14 ಕಾಲಗಣನೆಯ ರೀತ್ಯಾ 10,455-8,533 ವರ್ಷಗಳಷ್ಟು ಪುರಾತನವೆನಿಸಿದೆ. ಯೂಟಾ ಪ್ರಾಂತ್ಯದ ಡೇಂಜರ್ ಗುಹೆಯಲ್ಲಿ ದೊರಕಿದ ಮೊನೆಗಳೂ ಅರೆಯುವ ಕಲ್ಲುಗಳೂ ಪ್ರ.ಶ.ಪು. 9,000 ವರ್ಷಗಳಷ್ಟು ಹಳೆಯವು. ಅರಿಜೋನ ಮತ್ತು ನ್ಯೂ ಮೆಕ್ಸಿಕೊಗಳಲ್ಲಿನ ಕೊಚೀಸ್ ಸಂಸ್ಕೃತಿಯಲ್ಲಿ ಅರೆಯುವ ಕಲ್ಲುಗಳು ಪ್ರಮುಖವಾದವು. ಅಳಿದ ಜಾತಿಯ ಆನೆ, ಕುದುರೆ ಮತ್ತು ಕಾಡೆಮ್ಮೆಗಳ ಅವಶೇಷಗಳೂ ದೊರಕಿವೆ.

ಉತ್ತರ ಅಮೆರಿಕದ ವಾಯವ್ಯ ಪ್ರದೇಶಗಳಲ್ಲಿ ಬೇಟೆಯೇ ಮುಖ್ಯ ಕಸುಬಾಗಿದ್ದ ಹಾಗೂ ಮೀನುಗಾರಿಕೆಯಲ್ಲೂ ಪರಿಶ್ರಮ ಪಡೆದಿದ್ದು, ಜಿಂಕೆ ಕೊಂಬಿನ ಮತ್ತು ಕಲ್ಲಿನ ಆಯುಧಗಳನ್ನು ಉಪಯೋಗಿಸುತ್ತಿದ್ದ ಸಂಸ್ಕೃತಿಗಳ ಅವಶೇಷಗಳು ಸಿಕ್ಕಿವೆ. ವಾಷಿಂಗ್ಟನ್ ಮತ್ತು ಒರೆಗಾನ್ ಪ್ರದೇಶಗಳಲ್ಲಿ ದೊರಕಿರುವ ಮಾಹಿತಿಗಳ ಕಾಲ ಪ್ರ.ಶ. ಪು. 8,000.

ಅಲಾಸ್ಕ ಮತ್ತು ಕೆನಡದ ಉತ್ತರ ಭಾಗಗಳಲ್ಲಿ ಡೆನ್ಬಿಗ್ ಎಂದು ಹೆಸರಾದ ಸಂಸ್ಕೃತಿಯ ಮಾಹಿತಿಗಳು ವಿಶೇಷವಾಗಿ ಕಂಡುಬಂದಿವೆ. ಈ ಸಂಸ್ಕೃತಿಯಲ್ಲಿ ವಿಶಿಷ್ಟ ರೀತಿಯ ಆಯುಧಗಳೂ ಅಶ್ರಗ್ರಾಕಾರದ ಚಕ್ಕೆ ಕಲ್ಲಿನಾಯುಧಗಳೂ ಕೊರೆಯುವ ಆಯುಧಗಳೂ ಮುಖ್ಯ. ಪ್ರ.ಶ.ಪು. 6,500 ರಷ್ಟು ಇವು ಪುರಾತನ.

ಪಶ್ಚಿಮ ಭಾಗಗಳಲ್ಲಿ ಪ್ರಸಕ್ತಶಕನ ಆದಿಯ ವೇಳೆಗೆ ಮರುಭೂಮಿಯ ಸಂಸ್ಕೃತಿಯ ಪ್ರಭಾವದಿಂದ ಜೋಳದ ವ್ಯವಸಾಯವೇ ಮುಖ್ಯ ಕಸಬಾಗಿದ್ದ ಹಲವಾರು ಪಂಗಡಗಳು ಹುಟ್ಟಿಕೊಂಡುವು. ಈ ಪಂಗಡಗಳಲ್ಲಿ ಆನಸಾಜಿû ಜನ ಎತ್ತರವಾದ ಪ್ರಸ್ಥಭೂಮಿ ಪ್ರದೇಶಗಳಲ್ಲೂ ನೀರಾವರಿಯಿಂದ ಜೋಳದ ವ್ಯವಸಾಯ ಮಾಡುತ್ತಿದ್ದ ಹಹೋಕಮ್ ಜನ ಮರಳ್ಗಾಡು ಪ್ರದೇಶಗಳಲ್ಲೂ ಸಸ್ಯಾಹಾರ ಸಂಗ್ರಹಿಸಿ ಜೀವನ ನಡೆಸುತ್ತಿದ್ದ ಮೊಗೊಲಾನ್-ಮಿಂಬ್ರೆಸ್ ಜನ ಬೆಟ್ಟಗುಡ್ಡ ಪ್ರದೇಶಗಳಲ್ಲೂ ನೆಲೆಸಿದ್ದರು. ಆನಸಾಜಿû ಜನ ಪ್ರ.ಶ. 2ನೆಯ ಶತಮಾನದಿಂದ ಭೂಮಿ ಅಗೆದು ಜೋಳಬೆಳೆದು ಅರೆದು ತಿನ್ನುತ್ತಿದ್ದರು. ಕಾಡಿನಲ್ಲಿ ಬೆಳೆದ ಸಸ್ಯ, ಕುಂಬಳಕಾಯಿ, ಬೇಟೆಯಲ್ಲಿ ಕೊಂದ ಸಣ್ಣ ಕಾಡುಪ್ರಾಣಿಗಳು ಇವರ ಆಹಾರ. ಜೇಡಿಮಣ್ಣಿನ ಕೊಳವೆಗಳಲ್ಲಿ ಹೊಗೆಸೊಪ್ಪು ಸೇದುವುದುವರ ಚಟ. ಇವರಿಗೆ ಮಣ್ಣಿನ ಪಾತ್ರೆಗಳ ಉಪಯೋಗ ಗೊತ್ತಿರಲಿಲ್ಲ. ಗುಹೆಗಳಲ್ಲಿ ಚರ್ಮದ ಅರಿವೆಗಳಿಂದ ಶವಗಳನ್ನು ಸುತ್ತಿ ಹೂಳುವುದು ಇವರ ಪದ್ಧತಿ. ಸಣ್ಣ ಗ್ರಾಮಗಳಲ್ಲಿ ವರ್ತುಲಾಕಾರದ ಗುಡಿಸಲುಗಳಲ್ಲಿ ಇವರ ವಾಸ. ಪ್ರ. ಶ. 500-700ರ ಸುಮಾರಿನಲ್ಲಿ ಹುರುಳಿ ವ್ಯವಸಾಯವೂ ಬಾತುಕೋಳಿ ಸಾಕಣೆಯೂ ಬಳಕೆಗೆ ಬಂದವು. ಬಿಲ್ಲುಬಾಣಗಳ ಉಪಯೋಗ ಆರಂಭವಾಯಿತು. ಕೊನೆಗೆ ಮಣ್ಣಿನ ಪಾತ್ರೆಗಳೂ ಬಳಕೆಗೆ ಬಂದವು. ಪ್ವೆಬ್ಲೊ ಸಂಸ್ಕೃತಿ ಕಾಲದಲ್ಲಿನ (700-1300) ಗ್ರಾಮಗಳು ಹೆಚ್ಚು ವಿಶಾಲ. ಬೆಟ್ಟಗಳ ತಪ್ಪಲುಗಳಂತೂ ಜನಭರಿತ. ಒಂದರಿಂದ ನಾಲ್ಕು ಅಂತಸ್ತುಗಳ ಸುಮಾರು ಒಂದು ಸಾವಿರ ಕೋಣೆಗಳಿರುತ್ತಿದ್ದ ವಿಶಾಲ ಭವನಗಳಿದ್ದವು. ಪ್ವೆಬ್ಲೊ ಸಂಸ್ಕೃತಿಯ ಅಂತ್ಯಕಾಲದಲ್ಲಿ (ಪ್ರ.ಶ. 1300-1700) ಆನಸಾಜಿû ಜನರಿನ್ನೂ ಶಿಲಾಯುಗ ಸಂಸ್ಕೃತಿ ಮಟ್ಟದಲ್ಲೇ ಇದ್ದರೂ ಸ್ಪೇನಿನ ಜನರ ಪ್ರವೇಶದಿಂದ ಇಲ್ಲಿ ಐರೋಪ್ಯ ಸಂಸ್ಕೃತಿಯ ಪ್ರಭಾವ ಕ್ರಮೇಣ ಹರಡಿತು.
ಪೂರ್ವದ ಪ್ರದೇಶಗಳಲ್ಲಿ ಪುರಾ ಸಂಸ್ಕೃತಿ ಕ್ರಮೇಣ ಕೊನೆಗೊಂಡು ಬಹುಶಃ ಪ್ರ.ಶ.ಪು 500ರ ಮಧ್ಯಕಾಲದಲ್ಲಿ ಮನ್ಯ (ಮುಡ್ಲ್ಯಾಂಡ್) ಸಂಸ್ಕೃತಿ ಬೆಳೆಯಿತು. ಉತ್ತರ ದಿಕ್ಕಿನಿಂದ ಮಣ್ಣಿನ ಪಾತ್ರೆಗಳ ತಯಾರಿಕೆಯನ್ನೂ ಸಮಾಧಿ ದಿಬ್ಬ ನಿರ್ಮಿಸುವ ವಿಧಾನವನ್ನು ನೈರುತ್ಯ ಪ್ರದೇಶಗಳಿಂದ ಜೋಳದ ವ್ಯವಸಾಯವನ್ನೂ ಈ ಕಾಲದ ಜನ ಕಲಿತರು. ಧೂಮಪಾನವೂ ನೇಯ್ಗೆಯೂ ಇವರಿಗೆ ಗೊತ್ತಿದ್ದವು. ಈ ಗುಂಪಿಗೆ ಸೇರಿದ ಅಡೆನಾ ಸಂಸ್ಕೃತಿ ಒಹಾಯೊ, ಇಂಡಿಯಾನ, ಕೆಂಟಕಿ, ವರ್ಜೀನಿಯ ಮತ್ತು ಪೆನ್ಸಿಲ್ವೇನಿಯದ ಹಲವಾರು ಪ್ರದೇಶಗಳಲ್ಲೂ ಇಲಿನಾಯ್, ಮಿಸಿಸಿಪ್ಪಿ, ಲವೀಸಿಯಾನ, ಫ್ಲಾರಿಡ, ಓಕ್ಲಹಾಮ ಮತ್ತು ನ್ಯೂಯಾರ್ಕ್ ಪ್ರಾಂತ್ಯಗಳಲ್ಲೂ ಹಬ್ಬಿತ್ತು.

ಈ ಪ್ರದೇಶಗಳಲ್ಲಿ ಸು.ಪ್ರ.ಶ. 1000 ದರಲ್ಲ್ಲಿ ಕಾಡುಪ್ರದೇಶ ಸಂಸ್ಕೃತಿಗಳು ಕೊನೆಗೊಂಡು ಮಧ್ಯ ಸಂಸ್ಕೃತಿ ತಲೆದೋರಿತು. ಈ ಸಂಸ್ಕೃತಿಯಲ್ಲಿ ಅಂಥ ಮುನ್ನಡೆಯೇನೂ ಕಂಡುಬರದಿದ್ದರೂ ಸಾಮಾಜಿಕ ಜೀವನರಂಗದಲ್ಲಿ ಸಾಂಪ್ರದಾಯಿಕತೆ ಬೆಳೆಯಿತು. ಈ ಕಾಲಕ್ಕೆ ಸಂಬಂಧಿಸಿದ ಚಚ್ಚೌಕ ದೇವಾಲಯಗಳ ಹಾಗೂ ಸಾಮೂಹಿಕ ಭವನಗಳ ಅವಶೇಷಗಳು ಹೆಚ್ಚಾಗಿ ಕಂಡುಬಂದಿವೆ. ಈ ರೀತಿಯ ಕಟ್ಟಡದ ಅವಶೇಷವೊಂದು 16 ಎಕರೆ ಭೂಮಿಯನ್ನಾಕ್ರಮಿಸಿಕೊಂಡಿದೆ. ಇದು 330ಮೀ ಉದ್ದ, 216 ಮೀ ಅಗಲ, ಸು. 30ಮೀ ಎತ್ತರ. ಜೇಡಿಮಣ್ಣು, ಕಲ್ಲು, ಶಂಖ, ತಾಮ್ರಗಳ ರೆಕ್ಕೆಯಿರುವ ಸರ್ಪದ ಹಾಗೂ ನೃತ್ಯನಿರತ ಪಕ್ಷಿಮಾನವನ ಶಿಲ್ಪಗಳು ಹೇರಳ.

ಉತ್ತರ ಅಮೆರಿಕದ ಇತರ ಪ್ರದೇಶಗಳಲ್ಲಿ ಬೇಟೆ, ಮೀನುಗಾರಿಕೆ ಮತ್ತು ಆಹಾರ ಸಂಗ್ರಹಣೆಯಿಂದ ಜೀವಿಸುತ್ತಿದ್ದ ಹಿಂದುಳಿದ ಜನಾಂಗಗಳು ಇತ್ತೀಚಿನವರೆಗೂ ಉಳಿದು ಬಂದಿದ್ದವು. ಭಿನ್ನವಾದ ವಾಯುಗುಣವೇ ಮುಂತಾದ ನಾನಾ ಭೌತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದುದರ ಫಲವಾಗಿ ಈ ವಿವಿಧ ಪ್ರದೇಶಗಳ ಸಂಸ್ಕೃತಿಗಳಲ್ಲಿ ವೈವಿಧ್ಯ ಬೆಳೆಯಿತು. ಇತ್ತೀಚಿನವರೆಗೂ ಇವು ಶಿಲಾಯುಗದ ಹಂತದಲ್ಲೇ ಉಳಿದು ಬಂದಿದ್ದವು. ಸಾಮಾಜಿಕ ವ್ಯವಸ್ಥೆ ಮಾತ್ರ ಸಂಕೀರ್ಣವಾಯಿತು. ಸಮಾಜದಲ್ಲಿ ನಾಯಕ ಮತ್ತು ಶ್ರೀಮಂತ, ಜನಸಾಮಾನ್ಯ ಮತ್ತು ದಾಸ್ಯವರ್ಗಗಳು ರೂಢಿಯಲ್ಲಿದ್ದವು. ಸಾಂಪ್ರದಾಯಿಕ ಆಚರಣೆ ಮತ್ತು ವೈಭವ ಪ್ರದರ್ಶನಗಳಿಗಾಗಿ ಹೆಚ್ಚು ಐಶ್ವರ್ಯದ ಪೋಲಾಗುತ್ತಿತ್ತು. 	 	  (ಬಿ.ಕೆ.ಜಿ.)

ಉತ್ತರ ಅಮೆರಿಕದ ಭೂ ವಿನ್ಯಾಸ

ಶಿಲೆಗಳ ರಚನೆ, ಸಂಯೋಜನೆ ಅವಿತಿರುವ ಭೂಭಾಗದ ಇತಿಹಾಸ ಮತ್ತು ಅವುಗಳ ಪ್ರಸಕ್ತಸ್ಥಿತಿ ಈ ಅಂಶಗಳನ್ನನುಸರಿಸಿ ಉತ್ತರ ಅಮೆರಿಕವನ್ನು ಐದು ವಿಭಾಗಗಳಾಗಿ ವಿಂಗಡಿಸಬಹುದು. 
ಕೆನಡಿಯನ್ ಶಾಶ್ವತ ಭೂಖಂಡ: ಈ ಭಾಗದಲ್ಲಿ ಪ್ರಪಂಚದಲ್ಲೇ ಅತ್ಯಂತ ಪುರಾತನ ವೆನಿಸಿದ ಶಿಲೆಗಳನ್ನು ಕಾಣಬಹುದು. ಇವುಗಳಲ್ಲಿ ಬಹುಪಾಲು ಕಣ ಶಿಲೆಗಳ ಸಮುದಾಯ, ರಚನೆಯೂ ಬಹುಕ್ಲಿಷ್ಟ. ಈ ಆಧಾರದ ಮೇಲೆ ಈ ಭೂಭಾಗ ಹಲವಾರು ಬಾರಿ ತೀವ್ರ ತೆರನಾದ ಭೂ ಚಟುವಟಿಕೆಗಳಿಗೆ ಒಳಗಾಗಿತ್ತೆಂದು ಊಹಿಸಬಹುದು. ಪ್ರಸ್ತುತ ಮೇಲ್ಮೈಲಕ್ಷಣ ಭೂಚರಿತ್ರೆಯ ಆದಿಯುಗಗಳಲ್ಲಿ ಉಂಟಾದ ಪರ್ವತಜನ್ಯಶಕ್ತಿಗಳಿಂದಲೇ ಆದುದೆಂದು ಭಾವಿಸಲು ಸಾಧ್ಯವಿಲ್ಲ. ಅದು ಇತ್ತೀಚಿನ ಯುಗಗಳಲ್ಲಿ ಕಂಡುಬಂದ ಹಿಮನದಿಗಳ ಕಾರ್ಯಾಚರಣೆಯಿಂದಾದುದು. ಪ್ಲಿಸ್ಟೋಸೀನ್ ಕಾಲದಲ್ಲಿ ಉತ್ತರ ಅಮೆರಿಕದ ಇಡೀ ಉತ್ತರ ಭಾಗಗಳನ್ನೆಲ್ಲ ಆವರಿಸಿದ್ದ ಖಂಡಾಂತರ ವರ್ಗದ ಹಿಮಗಳಿಗೆ ಈ ಭಾಗವೇ ಕೇಂದ್ರವಾಗಿತ್ತು. ಇಲ್ಲಿಂದ ಹಿಮನದಿಗಳು ದಕ್ಷಿಣದತ್ತ ಚಲಿಸಿದವು. ಹೀಗೆ ಮಂದಗತಿಯಲ್ಲಿ ಚಲಿಸುವಾಗ ಬೀಳುಬಿದ್ದ ಭೂಮಿಯ ಹೊರಮೈಯ ಶಿಲಾವಶೇಷಗಳನ್ನು ತಮ್ಮೊಡನೆ ಹೊತ್ತು ಮುಂದುವರಿದವು. ಕ್ರಮೇಣ ಹಿಮನದಿಗಳು ಕರಗಿದಾಗ ಅವುಗಳೊಡನೆ ಸಾಗುತ್ತಿದ್ದ ಶಿಲಾಕಳಪೆಯ ಬಹುಭಾಗ ದೂರದ ಕೇಂದ್ರದ ತಗ್ಗು ಪ್ರದೇಶಗಳಲ್ಲೂ ಅಲ್ಪಸ್ವಲ್ಪ ಭಾಗ ಕೆನಡಿಯನ್ ಭೂಖಂಡದಲ್ಲೂ ಸಂಚಿತವಾಯಿತು.

ಶಾಶ್ವತ ಭೂಖಂಡದ ಬಹುಭಾಗ ಹಿಮನದಿಗಳಿಂದ ತೇಯಲ್ಪಟ್ಟು ಅಷ್ಟು ಕಡಿದಾಗಿರದ ಬೆಟ್ಟಗಳಿಂದ ಕೂಡಿದೆ. ಇವುಗಳ ಸಾಮಾನ್ಯ ಎತ್ತರ ನೂರು ಅಡಿಗಳು. ಈ ಭೂಭಾಗದಲ್ಲಿ ಅನೇಕ ಕಡೆ ಹಿಮನದಿಗಳ ಕೊರೆತದಿಂದುಂಟಾದ ಸರೋವರಗಳು, ಕಮರಿಗಳು ಮತ್ತು ಜೌಗುಪ್ರದೇಶಗಳನ್ನು ನೋಡಬಹುದು. ಹಲವು ಭಾಗಗಳಲ್ಲಿ ಬಹು ಎತ್ತರವಾದ ಮತ್ತು ಅಷ್ಟೇ ಕಡಿದಾದ ಪರ್ವತ ಸಾಲುಗಳೂ ಇವೆ. ಇವು ಅಷ್ಟಾಗಿ ಹಿಮನದಿಯ ಹಾವಳಿಗೆ ಒಳಗಾಗಿಲ್ಲ. ಅಂದರೆ ಹಿಮನದಿಗಳು ಇವುಗಳಿಗಿಂತ ಕೆಳಮಟ್ಟದಲ್ಲಿದ್ದು ಇವುಗಳನ್ನು ಸಂಪೂರ್ಣವಾಗಿ ಆವರಿಸಲು ಸಾಧ್ಯವಾಗಲಿಲ್ಲ.

ಕೇಂದ್ರದ ತಗ್ಗು ಪ್ರದೇಶ
ಇದು ಕೆನಡಿಯನ್ ಶಾಶ್ವತ ಭೂಖಂಡದ ದಕ್ಷಿಣ ಮತ್ತು ಪಶ್ಚಿಮದತ್ತ ಹರಡಿದೆ. ಇಲ್ಲಿ ಕಣಶಿಲೆಗಳಿಂದ ಕೂಡಿದ ತಳದ ಶಿಲಾ ಸಮುದಾಯದ ಮೇಲೆ ಜಲಜಶಿಲಾ ಪ್ರಸ್ತರಗಳು ಕಂಡುಬರುತ್ತವೆ. ಪಶ್ಚಿಮ ಮತ್ತು ಪೂರ್ವ ವಲಯಗಳ ಪರ್ವತ ಶ್ರೇಣಿಗಳು ಮತ್ತು ಶಾಶ್ವತ ಭೂಖಂಡ ಪ್ರದೇಶಗಳ ಸವೆತದಿಂದ ಬಂದ ಶಿಲಾಛಿದ್ರಗಳ ಸಂಚಯನದಿಂದ ಉಂಟಾದುದೇ ಈ ಶಿಲಾಪ್ರಸ್ತರ ಸಮೂಹ. ಭೂಮಿಯ ಇತರ ಭಾಗಗಳನ್ನು ಮಡಿಸಿ ಸುಕ್ಕುಮಾಡಿದ ಭೂಚಟುವಟಿಕೆಗಳ ಪ್ರಭಾವಕ್ಕೆ ಈ ಪ್ರದೇಶ ಒಳಗಾಗಿಲ್ಲವೆಂದೇ ಹೇಳಬೇಕು. ಇಲ್ಲಿಯ ಪೆಲಿಯೋಜೋ಼ಯಿಕ್ ಯುಗದ ಜಲಜಶಿಲೆಗಳು ಬೃಹದಾಕಾರದ ಗುಮ್ಮಟಗಳಾಗಿ, ಕಮಾನುಗಳಾಗಿ, ಬಾಣಲೆಯಂತೆ ಕುಳಿಬಿದ್ದು ಕಮರಿಗಳಾಗಿ ಮಾರ್ಪಟ್ಟ್ಟಿದ್ದರೂ ಅವುಗಳ ಮಟ್ಟಸವಾದ ವಿನ್ಯಾಸ ಎಲ್ಲೆಲ್ಲೂ ಎದ್ದು ಕಾಣುತ್ತದೆ. ತಗ್ಗುಪ್ರದೇಶದ ಪಶ್ಚಿಮ ಭಾಗದಲ್ಲಿ ಮೀಸೊಜೋ಼ಯಿಕ್ ಮತ್ತು ಟರ್ಷಿಯರಿ ಯುಗಗಳ ಜಲಜಶಿಲೆಗಳ ಸಮುದಾಯ ವಿದೆ. ಈ ಪ್ರಸ್ತರಶಿಲೆಗಳು ರಾಕಿ ಪರ್ವತಗಳ ಭೂಸವೆತದಿಂದ ಉಂಟಾದ ಶಿಲಾಬೀಳಿನ ಶೇಖರಣೆಯಿಂದಾದುವು. ಕ್ರಮೇಣ ಈ ಭೂಭಾಗದ ನದಿಗಳ ಕಾರ್ಯಾಚರಣೆ ನಡೆದಾಗ ಕಡಿದಾದ ಕಣಿವೆಗಳೂ ಕಂದರಗಳೂ ನಿರ್ಮಿತವಾದುವು.

ಪ್ಲಿಸ್ಟೊಸೀನ್ ಹಿಮನದಿಗಳು ತಾವು ಸಾಗಿಸುತ್ತಿದ್ದ ಶಿಲಾಕಣಗಳನ್ನು ಈಗಿನ ಮಿಸ್ಸೋರಿ ನದಿಯ ಪೂರ್ವ ಭಾಗದಲ್ಲೂ ಒಹಾಯೊ ನದಿಯ ಉತ್ತರ ಭಾಗದಲ್ಲೂ ಶೇಖರಿಸಿದವು. ಅಲ್ಲದೆ ಕೆಲವು ಕಡೆ ಹಿಮನದಿಗಳು ಹೊರಚಾಚುಗಳು ಕರಗಿ ತಾವು ತರುತ್ತಿದ್ದ ಶಿಲಾ ಬೀಳನ್ನು ಹಿಂದೆ ಬಿಟ್ಟ ಕಾರಣ ಸುಮಾರು ನೂರಿನ್ನೂರು ಅಡಿ ಎತ್ತರದ ಬೆಟ್ಟಗಳ ಸಾಲು ಮತ್ತು ಶಿಲಾ ಶ್ರೇಣಿಗಳು ಮೈವೆತ್ತವು; ಮತ್ತೆ ಕೆಲವು ವೇಳೆ ಹಿಮನದಿಗಳು ಸಾಗಿಸುತ್ತಿದ್ದ ಶಿಲಾ ಮುರಕಲು ಚೆಲ್ಲಾಪಿಲ್ಲಿಯಾಗಿ ಹರಡಿ ಕರಗಿದ ಹಿಮಗೆಡ್ಡೆಗಳ ನೀರಿಗೆ ಅಡ್ಡಗಟ್ಟಿದಂತಾಗಿ ಸಣ್ಣ ಪುಟ್ಟ ಸರೋವರಗಳೂ ಜೌಗು ಪ್ರದೇಶಗಳೂ ಉಂಟಾದವು. 
ಈ ಭೂಪ್ರದೇಶದ ದಕ್ಷಿಣದ ಭಾಗದಲ್ಲಿನ ಜಲಜಶಿಲಾ ಸಮುದಾಯವನ್ನು ದಾಟಿ ಹೋದಲ್ಲಿ ಅಪಲೇಷಿಯನ್ ಪ್ರಸ್ಥಭೂಮಿ ಮತ್ತು ಓeóÁರ್ಕ್ ಔಷಿಟಾ ಪ್ರಸ್ಥಭೂಮಿಗಳನ್ನು ನೋಡಬಹುದು. ಇಲ್ಲಿ ನೂರಾರು ಅಡಿ ಎತ್ತರದ ಕಡಿದಾದ ಬೆಟ್ಟಗಳೂ ಅತ್ಯಂತ ಆಳವಾದ ನದಿ ಕಣಿವೆಗಳೂ ಇವೆ.

ಅಪಲೇಷಿಯನ್ ಪ್ರಸ್ಥಭೂಮಿ ಪೆಲಿಯೋಜೋಯಿಕ್ ಯುಗದ ಶಿಲಾಪ್ರಸ್ತರಗಳು, ತೀವ್ರಗತಿಯ ಭೂಚಟುವಟಿಕೆಗಳಿಗೊಳಗಾದ ಕಾರಣ ಹೆಚ್ಚಿನ ರೀತಿಯಲ್ಲಿ ಮಡಿಕೆಬಿದ್ದು ಮೇಲಕ್ಕೆ ಒಯ್ಯಲ್ಪಟ್ಟು ಪರ್ವತಪಂಕ್ತಿಗಳಾಗಿವೆ. ಅನೇಕ ಕಡೆ ಸ್ತರಭಂಗಗಳನ್ನೂ ಗುರುತಿಸ ಬಹುದು. ಪೀಡ್ಮಾಂಟ್ ಮತ್ತು ಬ್ಲೂರಿಜ್ ಪರ್ವತಪ್ರದೇಶಗಳ ಶಿಲಾಸಮುದಾಯ ತೀವ್ರಗತಿಯ ಪರ್ವತಜನ್ಯ ಶಕ್ತಿಗಳಿಗೆ ಸಿಕ್ಕಿ ಕಣಶಿಲೆಗಳಾಗಿ ಮಾರ್ಪಟ್ಟಿವೆ.

ಈ ಕಣಶಿಲಾ ಸಮುದಾಯದ ಪಶ್ಚಿಮಕ್ಕೆ ಬೆಟ್ಟಗಳೂ ಕಣಿವೆಗಳೂ ಹರಡಿವೆ. ಭೂಶಕ್ತಿಗಳೂ ಪೂರ್ವದ ಕಡೆಯಿಂದ ಉದ್ಭವವಾದುವೆಂದು ಇವುಗಳ ಹರವು ಸೂಚಿಸುತ್ತದೆ. ಮುಂದೆ ತಲೆದೋರಿದ ಭೂ ಉತ್ಕರ್ಷ, ಮಡಿಕೆ ಬೀಳುವಿಕೆ, ಸ್ತರಭಂಗ ಮತ್ತು ಭೂಸವೆತಗಳೂ ಈ ಶಿಲೆಗಳ ರಚನೆಯನ್ನು ಕ್ಲಿಷ್ಟಗೊಳಿಸಿವೆ. ಇದನ್ನನುಸರಿಸಿಯೇ ಈ ಭೂಭಾಗದ ಇಂದಿನ ಮೈಲ್ಮೈಲಕ್ಷಣ ರೂಪುಗೊಂಡಿದೆ. ಭೂಶಕ್ತಿಗಳು ಪಶ್ಚಿಮದತ್ತ ಸರಿದು ಕ್ರಮೇಣ ಶಕ್ತಿಹೀನಗೊಂಡು ಕಟ್ಟಕಡೆಗೆ ಹೇಳಹೆಸರಿಲ್ಲದಂತಾದವು. ಹೀಗಾಗಿ ಪಶ್ಚಿಮ ಪ್ರದೇಶದ ಭೂಭಾಗಗಳ ಮೇಲ್ಮೈಲಕ್ಷಣ ನಿಖರವಾಗಿ ರೂಪುಗೊಂಡಿದ್ದರೂ ಶಿಲಾರಚನೆಯಲ್ಲಿ ಮೂಲಭೂತ ಬದಲಾವಣೆಗಳನ್ನು ಗುರುತಿಸಲು ಬಹು ಕಷ್ಟ. ಇವುಗಳ ಮತ್ತು ಪೂರ್ವ ಭಾಗಗಳ ಶಿಲಾಸಮುದಾಯಗಳ ರಚನೆಯಲ್ಲಿ ಸಾಮ್ಯತೆ ಕಂಡುಬಂದಿದೆ. ಇಲ್ಲಿಯೂ ಬೆಟ್ಟಗಳ ಸಾಲು ಮತ್ತು ಕಣಿವೆಗಳಿವೆ. ಇವು ಸಮುದ್ರಮಟ್ಟದಿಂದ ಬಹುತೇಕ 90-450ಮೀ ಗಳಷ್ಟು ಎತ್ತರವಾಗಿದೆ.

ತೀರ ಪ್ರದೇಶ
ಈ ಭಾಗದ ಶಿಲೆಗಳ ರಚನೆ ಬಹು ಸರಳ. ಇಡೀ ಉತ್ತರ ಅಮೆರಿಕದ ಬೇರೆಲ್ಲೂ ಇಷ್ಟು ಸರಳವಾದ ರಚನೆಯನ್ನು ನೋಡಲಾರೆವು. ಪೂರ್ವಕ್ಕೆ ಪೀಡ್ಮಾಂಟ್ ಕಣಶಿಲೆಗಳು. ಪಶ್ಚಿಮದತ್ತ ಕೇಂದ್ರ ತಗ್ಗುಪ್ರದೇಶ, ದಕ್ಷಿಣದ ಕಡೆ ಯಕಟಾನ್ ಪರ್ಯಾಯದ್ವೀಪ-ಈ ಭೂಭಾಗದ ಮೇಲೆ ಹೆಚ್ಟು ಗಡುಸಲ್ಲದ ಮೀಸೋಜೋ಼ಯಿಕ್ ಮತ್ತು ಟರ್ಷಿಯರಿ ಜಲಜಶಿಲಾನಿಕ್ಷೇಪಗಳನ್ನು ಗುರುತಿಸಬಹುದು. ಪ್ರಸ್ತರಗಳೂ ಸಾಮಾನ್ಯವಾಗಿ ಸಮುದ್ರದತ್ತ ವಾಲಿವೆ. ಸಮುದ್ರದ ಕರೆಯುದ್ದಕ್ಕೂ ಜೌಗುಪ್ರದೇಶವಿದ್ದು ಅದು ಈಚಿನ ವರ್ಷಗಳಲ್ಲಿ ಉಂಟಾದ ಭೂಭಾಗವೆಂದು ಮನಗಾಣಬಹುದು. ಅಲ್ಲಲ್ಲಿ ಭೂ ಸವೆತದಿಂದಾಗಿ ಸಣ್ಣಪುಟ್ಟ ಗುಡ್ಡಗಳೂ ಅಷ್ಟು ಕಡಿದಾಗಿರದ ಅಗಲವಾದ ಕಣಿವೆಗಳೂ ಇವೆ. 

ಪಶ್ಚಿಮ ಪರ್ವತಶ್ರೇಣಿ (ಕಾರ್ಡಿಲೆರ)
ಇವು ಕೆನಡಿಯನ್ ಶಾಶ್ವತ ಭೂಖಂಡದ ಮತ್ತು ಅಪಲೇಷಿಯನ್ ಪರ್ವತಗಳಿಗಿಂತಲೂ ವಯಸ್ಸಿನಲ್ಲಿ ಕಿರಿಯವು. ಬಹು ಎತ್ತರವಾಗಿಯೂ ಕಡಿದಾಗಿಯೂ ಇದ್ದು ಇಡೀ ಉತ್ತರ ಅಮೆರಿಕದ ಮೇಲ್ಮೈ ಲಕ್ಷಣದಲ್ಲಿ ಪ್ರಮುಖ ಸ್ಥಾನವನ್ನಾಕ್ರಮಿಸಿವೆ. ಶಿಲೆಗಳ ಹರವು ಉತ್ತರ-ದಕ್ಷಿಣಾಭಿಮುಖವಾಗಿದ್ದು ಅದನ್ನನುಸರಿಸಿ ಕಣಿವೆಗಳೂ ಕಂದರಗಳೂ ಮೈದೋರಿವೆ. ಈ ಶ್ರೇಣಿಯ ಉತ್ತರದ ಮತ್ತು ದಕ್ಷಿಣದ ಅತ್ಯುನ್ನತ ಶಿಖರಗಳು ಹಿಮನದಿಗಳಿಂದ ತೇಯಲ್ಪಟ್ಟು ಬಹು ಮೊನಚಾಗಿವೆ. ಈ ಕಾರ್ಯಾಚರಣೆಯಲ್ಲಿ ಬೀಳುಬಿದ್ದ ಶಿಲಾವಶೇಷಗಳು ಕಣಿವೆಗಳಲ್ಲಿ ಶೇಖರವಾಗಿವೆ. ಹಲವು ಶಿಖರಗಳ ತುದಿಯಲ್ಲಿ ಲುಪ್ತ ಮತ್ತು ಜಾಗೃತ ಜ್ವಾಲಾಮುಖಿಗಳಿವೆ. ಇವುಗಳಿಂದ ಹೊರಹೊಮ್ಮಿದ ಲಾವಾ ಪ್ರವಾಹಗಳು ಪ್ರಸ್ತರಗಳೋಪಾದಿಯಲ್ಲಿ ಶೇಖರಗೊಂಡಿವೆ. ಅಲ್ಲದೆ ಇವುಗಳೊಡನಿರುವ ಜಲಜ ಶಿಲೆಗಳು ಮಡಿಕೆ ಬೀಳದೆ, ತಮ್ಮ ಪ್ರಸ್ತರೀ ಸ್ವರೂಪವನ್ನು ಕಳೆದುಕೊಳ್ಳದೆ, ಭೂ ಉತ್ಕರ್ಷಗಳಿಗೊಳಗಾಗಿ ಸಹಸ್ರಾರು ಅಡಿಗಳ ಎತ್ತರಕ್ಕೆ ಒಯ್ಯಲ್ಪಟ್ಟು ವಿಶಾಲವಾದ ಪ್ರಸ್ಥಭೂಮಿಗಳಾಗಿ ಕಂಗೊಳಿಸುತ್ತವೆ.	(ಬಿ.ವಿ.ಜಿ.)

ವರ್ಗ: ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ